ಬೆಂಗಳೂರು,ಸೆ.20- ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ(ಜಾತಿಗಣತಿ)ಯನ್ನು ಮುಂದೂಡಬೇಕು ಹಾಗೂ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ರಾಜ್ಯಸರ್ಕಾರವನ್ನು ಆಗ್ರಹಿಸಿದರು.
ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ವಿವಿಧ ಮಠಾಧೀಶರು, ಒಕ್ಕಲಿಗ ಜನಾಂಗದ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳ ಪ್ರಮುಖರೊಂದಿಗೆ ನಡೆದ ಜಾತಿಗಣತಿಯ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಕಾಲಂ 9, 10, 11 ರಲ್ಲಿ ಏನೇ ಇದ್ದರೂ ಒಕ್ಕಲಿಗ ಎಂದೇ ಬರೆಸಬೇಕು. ಒಕ್ಕಲಿಗ ಜನಾಂಗದ ಕೋಡ್ 1541 ನಮೂದಿಸಬೇಕು. ಅಗತ್ಯವಿದ್ದರೆ ಮಾತ್ರ ತಮ ತಮ ಉಪಪಂಗಡಗಳನ್ನು ಬರೆಸಬೇಕು ಎಂದು ಕರೆ ನೀಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.30 ರಿಂದ 40 ರಷ್ಟು ಸಮೀಕ್ಷೆ ಆಗಿರಲಿಲ್ಲ. ಹಾಗಾಗಿ ಆ ವರದಿ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಜನರ ಭಾವನೆಗೆ ಸರ್ಕಾರ ಸ್ಪಂದಿಸಿ ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಅವಕಾಶ ಕಲ್ಪಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ಸೆ.22 ರಿಂದ 10 ದಿನಗಳ ಕಾಲ ನವರಾತ್ರಿ ವ್ರತ ಆಚರಣೆ ನಡೆಯುತ್ತದೆ. ಅಲ್ಲದೆ, ಈ ಸಂದರ್ಭದಲ್ಲಿ ಪಿತೃಪಕ್ಷ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ರೈತಾಪಿ ಸಮುದಾಯ ಕೃಷಿ ಚಟುವಟಿಕೆಯಲ್ಲಿ ಮಗ್ನವಾಗಿರುತ್ತದೆ. ಜೊತೆಗೆ ಶಾಲಾ ರಜಾದಿನಗಳಾಗಿರುವುದರಿಂದ ಪ್ರವಾಸವನ್ನು ಕೈಗೊಂಡಿರುತ್ತಾರೆ. ಹೀಗಾಗಿ ಈ ಕಾಲಘಟ್ಟ ವಾಸ್ತವಿಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ. ರಾಜ್ಯಸರ್ಕಾರ 400 ರಿಂದ 500 ಕೋಟಿ ರೂ. ವೆಚ್ಚ ಮಾಡಿ ಸಮೀಕ್ಷೆ ನಡೆಸುತ್ತಿತ್ತು. ಇದು ಅರ್ಥಪೂರ್ಣವಾಗಬೇಕು ಎಂಬುದೇ ನಮ ಅಪೇಕ್ಷೆ ಎಂದು ಹೇಳಿದರು.
ಸೂಕ್ತ ಕಾಲವಲ್ಲವಾದ್ದರಿಂದ ಸಮೀಕ್ಷೆಯನ್ನು ಮುಂದೂಡಬೇಕು. ಹಾಗೂ ಸಮೀಕ್ಷೆಗೆ ಹೆಚ್ಚು ಸಮಯ ನೀಡಬೇಕು. ತೆಲಂಗಾಣ ರಾಜ್ಯದಲ್ಲಿ 3.50 ಕೋಟಿ ಜನಸಂಖ್ಯೆ ಇದೆ. ಅಲ್ಲಿ 3 ತಿಂಗಳ ಕಾಲಾವಕಾಶ ಕೊಟ್ಟು ಉನ್ನತ ತಂತ್ರಜ್ಞಾನ ಬಳಸಿ ಸಮೀಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ 7 ಕೋಟಿಗೂ ಹೆಚ್ಚು ಜನಸಂಖ್ಯೆಯಿದ್ದು, ವೈಜ್ಞಾನಿಕವಾಗಿ ಆಗಬೇಕು. ಅದಕ್ಕಾಗಿ ಹೆಚ್ಚು ಸಮಯವನ್ನು ನೀಡಬೇಕು ಎಂದು ಶ್ರೀಗಳು ತಿಳಿಸಿದರು.
ಒಕ್ಕಲಿಗರ ಜಾತಿಯ ಜೊತೆಗೆ ವಿವಿಧ ಧರ್ಮ, ಜಾತಿಗಳನ್ನು ಸೇರಿಸಿರುವುದು ಅಸಮಾಧಾನ, ವೈರುಧ್ಯಕ್ಕೆ ಕಾರಣವಾಗಿದೆ. ಜಾತಿಗಣತಿ ಬಗ್ಗೆ ಶ್ರೀಮಠದ ಭಕ್ತರು ಹಾಗೂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಲ್ಲಾ ಜನಪ್ರತಿನಿಧಿಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಲಾಗಿದೆ. ಏಕೆಂದರೆ ಒಕ್ಕಲಿಗ ಸಮುದಾಯದ ಮುಖವಾಣಿ, ಸಮುದಾಯದ ಶಕ್ತಿ ಹಾಗೂ ಜನಪ್ರತಿನಿಧಿಗಳಾಗಿದ್ದಾರೆ. ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಈಗ ಪ್ರಕಟಿಸಿರುವ ಜಾತಿಗಳ ಪಟ್ಟಿ ಹಾಗೂ ಸಮೀಕ್ಷೆಯಲ್ಲಿ ಸಾಕಷ್ಟು ನ್ಯೂನತೆ ಕಂಡುಬಂದಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯಸರ್ಕಾರಕ್ಕೆ ಜನಗಣತಿ ಮಾಡುವ ಅಧಿಕಾರವಿಲ್ಲ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾತ್ರ ಸಮೀಕ್ಷೆ ಮಾಡಬೇಕು ಎಂಬುದು ತಮಗಿರುವ ಮಾಹಿತಿ. ಕೇಂದ್ರ ಸರ್ಕಾರ ಜನಗಣತಿ ನಡೆಸಲಿದ್ದು ಅದು ಅಧಿಕೃತವಾಗಲಿದೆ ಎಂದರು.

ಶೇ.90 ರಷ್ಟು ಒಕ್ಕಲಿಗರು ನಾವೇನೇ ಹೇಳಿದರೂ ಅವರು ಉಪಜಾತಿಯನ್ನು ಬರೆಸಲು ಸಿದ್ಧವಿಲ್ಲ. ಕಾರಣಾಂತರದಿಂದ ಸಣ್ಣಪುಟ್ಟ ಆಚರಣೆಯಿಂದ ಬಂದಿರುವ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಮನೆಗೆ ಸೀಮಿತವಾಗಿರುತ್ತವೆ ಎನ್ನುತ್ತಿದ್ದಾರೆ. ಹೀಗಾಗಿ ಪ್ರಜ್ಞಾವಂತ ರಾಜ್ಯಸರ್ಕಾರ ಜಾತಿಗಣತಿಯನ್ನು ಮುಂದೂಡಬೇಕು ಎಂದು ಆಗ್ರಹಿಸುತ್ತೇವೆ. ಸಕಾರಾತಕವಾಗಿ ಸ್ಪಂದನೆ ಮಾಡುತ್ತದೆ ಎಂಬ ನಿಲುವನ್ನು ಹೊಂದಿದ್ದೇವೆ ಎಂದು ಹೇಳಿದರು.
ಸಮುದಾಯದ ಜನಪ್ರತಿನಿಧಿಗಳಿಗೆ ಸರ್ಕಾರದಲ್ಲಿ ಸಮುದಾಯದ ದನಿಯಾಗುವಂತೆ ನಿರ್ದೇಶನ ಕೊಡಲಾಗಿದೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತದೆ ಎಂಬ ವಿಶ್ವಾಸವಿದೆ. ಸಮೀಕ್ಷೆಯಲ್ಲಿನ ನ್ಯೂನತೆಗಳು ಸರ್ಕಾರದ ಅರಿವಿಗೆ ಬಂದು ವಾಪಸ್ಸು ಪಡೆಯುತ್ತಾರೆ ಎಂಬ ನಿರೀಕ್ಷೆಯಿದೆ. ಕ್ರಿಶ್ಚಿಯನ್ ಒಕ್ಕಲಿಗ, ಜೈನ ಒಕ್ಕಲಿಗ ಎಂದೆಲ್ಲಾ ಉಲ್ಲೇಖಿಸಲಾಗಿದೆ. ಮುಂದೆ ಮುಸ್ಲಿಂ ಒಕ್ಕಲಿಗ, ಹಿಂದೂ ಕ್ರಿಶ್ಚಿಯನ್ ಆಗಬಹುದಲ್ಲವೇ ಎಂದು ಪ್ರಶ್ನಿಸಿದರು. ಧರ್ಮ ಒಡೆದಿರುವ ಬಗ್ಗೆ ಇತಿಹಾಸ ಅವಲೋಕಿಸಿದರೆ ಗಮನಕ್ಕೆ ಬರುತ್ತದೆ. ನಾಸ್ತಿಕ ಬಳಕೆಗೆ ಅವಕಾಶ ಕಲ್ಪಿಸಿರುವುದು ಗಮನಿಸಿದರೆ ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು ಎಂದರು.
ಪಾರದರ್ಶಕವಾಗಿರಲಿ :
ಗಣತಿಯ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ಪಡೆದ ಮೇಲೆ ಗಣತಿದಾರರು ಪೂರ್ಣ ಮಾಹಿತಿ ಪಡೆದು ಅಪ್ಲೋಡ್ ಮಾಡಿದ ಬಳಿಕ ಮನೆಯ ಯಜಮಾನನಿಗೆ ಅದರ ಪೂರ್ಣ ಮಾಹಿತಿ ಬಂದರೆ ಸಂತೋಷ. ಸಮೀಕ್ಷೆಯ ಮಾಹಿತಿಯೂ ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತಿರಬೇಕು, ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇವೆ ಎಂದು ಹೇಳಿದರು.