ಕೊಚ್ಚಿ, ಸೆ.21-ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ಮೊದಲ ಬಾರಿಗೆ ಕೇರಳಕ್ಕೆ ಆಗಮಿಸಿದ ಮೋಹನ್ ಲಾಲ್, ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲಿಗೆ ಈ ಗೌರವವನ್ನು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅರ್ಪಿಸುವುದಾಗಿ ಹೇಳಿದರು.
ಚಿತ್ರೋದ್ಯಮಕ್ಕೆ ಇನ್ನಷ್ಟು ಒಳ್ಳೆಯದಾಗಲಿ ಎಂದು ನಾನು ಬಯಸುತ್ತೇನೆ ಮತ್ತು ಈ ಮನ್ನಣೆ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ನಗುತ್ತಾ ಹೇಳಿದರು.ಇದೇ ವೇಲೆ ಭಾವುಕರಾದ ಮೋಹನ್ ಲಾಲ್ ದೇವರು, ಪ್ರೇಕ್ಷಕರು, ಪೋಷಕರು ಮತ್ತು ದೇಶಕ್ಕೆ ಹೃತ್ತೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
ಇದು ಅಪಾರ ಸಂತೋಷದ ಕ್ಷಣ. ನನ್ನ ಪ್ರಯಾಣದ ಭಾಗವಾಗಿದ್ದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು.ನನ್ನ 48 ವರ್ಷಗಳ ಸುದೀರ್ಘ ವೃತ್ತಿ ಜೀವನವನ್ನು ನೆನಪಿಸಿಕೊಂಡ ಅವರು ನನ್ನೊಂದಿಗೆ ನಡೆದ ಪ್ರತಿಯೊಬ್ಬರನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ಈ ಸಂದರ್ಭದಲ್ಲಿ ಅವರಿಗೆ ನನ್ನ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರು.
ತಮ್ಮನ್ನು ಇಂದು ಈ ಸ್ಥಿತಿಗೆ ತಂದಿದ್ದಕ್ಕಾಗಿ ಪ್ರೇಕ್ಷಕರು ಮತ್ತು ಮಲಯಾಳಂ ಚಲನಚಿತ್ರೋದ್ಯಮಕ್ಕೆ ಅವರು ಮನ್ನಣೆ ನೀಡಿದರು.ಮೋಹನ್ ಲಾಲ್ ಅವರು 2023 ಸಾಲಿಗೆ ಸಿನಿಮಾ ಕ್ಷೇತ್ರದಲ್ಲಿ ದೇಶದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದೆ.
ಭಾರತೀಯ ಸಿನಿಮಾಕ್ಕೆ ನೀಡಿದ ಅಪ್ರತಿಮ ಕೊಡುಗೆ ಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.