ಬೆಂಗಳೂರು : ಕ್ರಿಶ್ಚಿಯನ್ ಪದ ಜೋಡಿತ ಹಿಂದು ಉಪ ಜಾತಿಗಳ ಪಟ್ಟಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಕೈ ಬಿಡುವುದಕ್ಕೆ ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದ್ದು, ಬಿಜೆಪಿ ಓಬಿಸಿ ನಾಯಕರ ಹೋರಾಟಕ್ಕೆ ಜಯ ದೊರೆತಂತಾಗಿದೆ.
46 ಇಂತ ಹೊಸ ಜಾತಿಯನ್ನು ಆಯೋಗ ಪಟ್ಟಿ ಮಾಡಿತ್ತು. ಇದು ಸಾಮಾಜಿಕ ಹಾಗೂ ಮೀಸಲಾತಿ ವ್ಯವಸ್ಥೆಯಲ್ಲಿ ಭಾರಿ ಮಟ್ಟದ ಏರುಪೇರು ಹಾಗೂ ವಿಪ್ಲವಕ್ಕೆ ಕಾರಣವಾಗಬಹುದೆಂದು ಬಿಜೆಪಿ ಗುರುತಿಸಿತ್ತು. ಸಾಮಾನ್ಯವಾಗಿ ಇಂಥ ವಿಚಾರಗಳಲ್ಲಿ ಒಂದು ನರೇಟಿವ್ ಸೃಷ್ಟಿ ಮಾಡುವಲ್ಲಿ ವಿಫಲವಾಗುತ್ತಲೇ ಇದ್ದ ಬಿಜೆಪಿ ಈ ಬಾರಿ ಮಾತ್ರ ಜಾಗೃತಗೊಂಡಿತು.
ಸಾಮಾಜಿಕ ಹೋರಾಟಗಾರ ವಾದಿರಾಜ್ ಸಾಮರಸ್ಯ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಅಣಿಯಾಗಿದ್ದರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹಿಂದು ಜಾತಿ ಉಪನಾಮ ಬಳಕೆಯ ವಿರುದ್ಧ ಒಂದು ಜಾಗೃತಿ ಮೂಡಿತು. ಸುನೀಲ್ ಕುಮಾರ್ ಹಾಗೂ ಪಿ.ಸಿ.ಮೋಹನ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿ ಈ ಬಗ್ಗೆ ಮೊದಲು ಮನವಿ ಸಲ್ಲಿಸಲಾಯಿತು.
ಆ ಬಳಿಕ ಕ್ರಿಶ್ಚಿಯನ್ನರನ್ನು ಹಿಂದು ಜಾತಿಗಳೊಳಗೆ ತುರುಕುವುದನ್ನು ಖಂಡಿಸಿ ಸಾಮಾಜಿಕ ಜಾಗೃತಿ ವೇದಿಕೆ ಅಡಿಯಲ್ಲಿ ವಾದಿರಾಜ್ ಹಾಗೂ ಸುನೀಲ್ ಕುಮಾರ್ ಸಂಘಟಿಸಿದ ದುಂಡು ಮೇಜಿನ ಸಭೆಗಳು ಇತರೆ ಜಾತಿಯವರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿತು. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿ ಕ್ರಿಶ್ಚಿಯನ್ ಧರ್ಮ ಜೋಡಿತ ಹಿಂದು ಜಾತಿಗಳ ಪ್ರತ್ಯೇಕ ಸೃಷ್ಟಿಯಿಂದ ಆಗುವ ಅನಾಹುತದ ಬಗ್ಗೆ ಮನವರಿಕೆ ಮಾಡಲಾಯಿತು.
ಇದು ಸಮಾಜದ ಎಲ್ಲ ವರ್ಗದಲ್ಲೂ ಎಚ್ಚರಿಕೆಯ ಗಂಟೆ ಮೊಳಗಿಸುವ ಜತೆಗೆ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಧರ್ಮದ ಕಾಲಮ್ಮಿನಲ್ಲಿ ಹಿಂದು ಎಂದೇ ನಮೂದಿಸಬೇಕೆಂದು ಪಕ್ಷವಾಗಿ ಬಿಜೆಪಿ ಅಧಿಕೃತ ನಿರ್ಣಯ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಪ್ರಬಲ ಸಮುದಾಯಗಳು ಕೂಡಾ ಇದಕ್ಕೆ ಕೈಜೋಡಿಸಿವೆ. ಸಾಮಾನ್ಯವಾಗಿ ಹಿಂದುತ್ವದ ವಿಚಾರದಲ್ಲಿ ಮಾತ್ರ ನರೇಟಿವ್ ಕಟ್ಟುತ್ತಿದ್ದ ಬಿಜೆಪಿ ಈ ಬಾರಿ ಸಾಮಾಜಿಕ – ಶೈಕ್ಷಣಿಕ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ.
ಹಿಂದೂ -ಕ್ರಿಶ್ಚಿಯನ್ ಪದ ತೆಗೆಯಲು ಬಿಜೆಪಿ ಆಗ್ರಹ
ರಾಜ್ಯ ಸರ್ಕಾರ ನಾಳೆಯಿಂದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ(ಜಾತಿ ಗಣತಿ) ಸಮೀಕ್ಷೆಯಲ್ಲಿ ಹಿಂದು-ಕ್ರಿಶ್ಚಿಯನ್ ಕಾಲಂ ಅನ್ನು ತಕ್ಷಣವೇ ತೆಗೆದು ಹಾಕ ಬೇಕೆಂದು ಬಿಜೆಪಿ ಒತ್ತಾಯಿಸಿದೆ. ಉಪಜಾತಿಗಳ ಕಾಲಂನಲ್ಲಿ ಹಿಂದು-ಕ್ರಿಶ್ಚಿಯನ್ ಪದ ಸೇರಿಸಿರುವುದು ಮತಾಂತರಕ್ಕೆ ಪರೋಕ್ಷವಾಗಿ ಸರ್ಕಾರವೇ ಕುಮಕು ನೀಡಿದಂತಿದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗವು ಈ ಪದವನ್ನು ತೆಗೆದು ಹಾಕಲು ಸರ್ಕಾರ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ಕೊಟ್ಟಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಜಾತಿ ಸಮೀಕ್ಷೆ ಹೆಸರಲ್ಲಿ ಹಿಂದೂ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಜಾತಿ ಸಮೀಕ್ಷೆ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.ಪಕ್ಷಾತೀತವಾಗಿ ಹೊಸ ಜಾತಿಗಳ ಪಟ್ಟಿಗೆ ವಿರೋಧಿಸಲಾಗುತ್ತಿದೆ. ಕ್ರಿಶ್ಚಿಯನ್ ಜತೆ 48 ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಇನ್ನೂ ಅಧಿಕೃತವಾಗಿ ಈ 48 ಜಾತಿಗಳ ಪಟ್ಟಿ ಹಿಂದಕ್ಕೆ ಪಡೆಯುವ ಘೋಷಣೆ ಮಾಡಿಲ್ಲ.
ಹಿಂದೂಗಳ ಮೀಸಲಾತಿ ಕಸಿದು ಧರ್ಮಾಂತರವಾದವರಿಗೆ ಕೊಡುವ ದುರುದ್ದೇಶದಿಂದ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಜತೆಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಕುಮಕ್ಕು, ಹಿಂದೂ ಧರ್ಮ ಒಡೆಯುವ ಪಿತೂರಿ ಇದು ಎಂದು ಆರೋಪಿಸಿದರು.ಈ ಕೂಡಲೇ 48 ಅನಧಿಕೃತ ಜಾತಿಗಳ ಪಟ್ಟಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ಹೊಸ ಜಾತಿಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಇಷ್ಟೆಲ್ಲ ವಿರೋಧ ಮಾಡುತ್ತಿದ್ದರೂ ಸರ್ಕಾರ ಭಂಡತನ ತೋರುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅವಕಾಶ ಇಲ್ಲ. ಆದರೂ ಮಾಡಲು ಹೊರಟಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಯಾರ ಸಲಹೆಯೂ ಪಡೆಯದೇ ತರಾತುರಿಯಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. ಇದು ಬೇಜವಾಬ್ದಾರಿತನದ ನಡೆ, ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿಗೂ ತರಬೇತಿ ಕೊಟ್ಟಿಲ್ಲ ಎಂದು ಆರೋಪಿಸಿದರು.ಸಮೀಕ್ಷೆ ಮಾಡಲು ಯಾರ ವಿರೋಧವೂ ಇಲ್ಲ. ಸಮೀಕ್ಷೆ ಬಗ್ಗೆ ಬಿಜೆಪಿಯ ನಿಲುವೂ, ಆದಿಚುಂಚನಗಿರಿ ಮಠದ ನಿಲುವೂ ಸ್ಪಷ್ಟವಾಗಿದೆ. ಸಮೀಕ್ಷೆ ಗೊಂದಲಗಳಿಲ್ಲದೇ ವೈಜ್ಞಾನಿಕವಾಗಿ ಜಿಯೋ ಟ್ಯಾಗಿಂಗ್ ಮಾಡಿ ಸಮೀಕ್ಷೆ ಮಾಡಬೇಕು ಎಂಬುದು ನಮ ಒತ್ತಾಯ ಎಂದರು.
ತೆಲಂಗಾಣ ಮಾದರಿ ಎಂದು ಹೇಳುತ್ತಿದ್ದಾರ. ಅಲ್ಲಿ ಸಮೀಕ್ಷೆಗೆ ಮೂರು ತಿಂಗಳು ತಗೊಂಡರು. ಆದರೆ ನಮ ರಾಜ್ಯದ ಮಾದರಿ ಬೇರೆ ಇದೆ. ಇವರು ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟು ತರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದ ಸಮೀಕ್ಷೆಗೆ ಸಂವಿಧಾನದ ಮಾನ್ಯತೆ ಇಲ್ಲ. ಸಮೀಕ್ಷೆಯ ಕಾಲಂನಲ್ಲಿ ಗುಪ್ತರೋಗದ ಬಗ್ಗೆಯೂ ಮಾಹಿತಿ ಕೇಳುವ ಪ್ರಶ್ನೆ ಇದೆ. ಇವರು ಎಡಬಿಡಂಗಿಯಾಗಿ ಸಮೀಕ್ಷೆ ಮಾಡುತ್ತಿದ್ದಾರೆ. ಗುಪ್ತ ರೋಗದ ಬಗ್ಗೆ ಯಾಕೆ ಮಾಹಿತಿ ಕೇಳುತ್ತಾರೆ. ಈ ಬಗ್ಗೆ ಮಾಹಿತಿ ಕೇಳುತ್ತಾರೆ ಎಂದರೆ ಅಲ್ಲಿಗೆ ಸಮೀಕ್ಷೆ ಬಿದ್ದುಹೋಯಿತು ಎಂದೇ ಅರ್ಥ. ಗುಪ್ತರೋಗದ ಬಗ್ಗೆ ಕೇಳುವ ವಿಚಾರ ಕಾನೂನಾತಕವಲ್ಲ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ಸರಕಾರ 47 ಕ್ರಿಶ್ಚಿಯನ್ ಜೋಡಿತ ಜಾತಿಗಳ ಪಟ್ಟಿ ತೆಗೆಯದೇ 33 ಹೊಸ ಜಾತಿಗಳನ್ನಷ್ಟೇ ಮಾತ್ರ ತೆಗೆದಿದೆ ಎಂಬ ಮಾಹಿತಿ ಇದೆ. 47 ಹೊಸ ಜಾತಿಗಳ ಹೆಸರು ತೆಗೆದಿರುವ ಬಗ್ಗೆ ಸರ್ಕಾರ ಪ್ರಕಟಣೆ, ಜಾಹೀರಾತು ಹೊರಡಿಸಲಿ ಎಂದರು.
33 ರದ್ದು ಮಾಡಿ 13 ಹೊಸ ಜಾತಿಗಳ ಹೆಸರು ಉಳಿಸಿದ್ದೇಕೆ? ಮಾದಾರ, ಕುರುಬ, ಬ್ರಾಹಣ, ಮಡಿವಾಳ, ಬಂಜಾರ, ನೇಕಾರ, ಒಕ್ಕಲಿಗ, ಲಿಂಗಾಯತ ಕ್ರಿಸ್ಚಿಯನ್ ಹೆಸರುಗಳನ್ನು ಉಳಿಸಿದ್ದಾರೆ ಎಂಬ ಸುದ್ದಿ ಇದೆ. ಈ ಹೊಸ ಜಾತಿಗಳ ಹೆಸರು ಒತ್ತಾಯಪೂರ್ವಕವಾಗಿ ಯಾಕೆ ಉಳಿಸಿದ್ದೀರಿ? ಎಂದು ಪ್ರಶ್ನಿಸಿದರು.ಇದು ದುರುದ್ದೇಶಪೂರ್ವಕವಾಗಿ ಮಾಡುತ್ತಿರುವ ಸಮೀಕ್ಷೆ ಕ್ರಿಶ್ಚಿಯನ್ ಜೋಡಿತ ಎಸ್ಸಿ ಸಮುದಾಯಗಳನ್ನು ಯಾಕೆ ಉಳಿಸಿದ್ದೀರಿ? ಎಸ್ಸಿ ಸಮುದಾಯ ಕ್ರಿಶ್ಚಿಯನ್‌ಗೆ ಮತಾಂತರವಾಗಲಿ ಎಂಬ ಉದ್ದೇಶವಿದೆಯೇ? ಎಂದು ಪ್ರಶ್ನೆ ಮಾಡಿದರು.
ಎಲ್ಲ ಹೊಸ ಜಾತಿಗಳ ಪಟ್ಟಿಯಿಂದ ತೆಗೆಯಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಸರ್ವೆ ಮಾಡುವವರಿಗೆ ಇನ್ನು ತರಬೇತಿ ನೀಡಿಲ್ಲ. ನಾಗಮೋಹನ ದಾಸ್ ಸರ್ವೆ ಮಾಡಿ ಇನ್ನೂ ಎರಡು ತಿಂಗಳು ಆಗಿಲ್ಲ. ಈಗ ಮತ್ತೆ ಎಸ್ಸಿ, ಎಸ್ಟಿ ಅವರ ಮನೆಗೆ ಸರ್ವೆ ಹೋದರೆ ಅವರು ಏನು ಅಂದುಕೊಳ್ಳುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.ಮೂರು ತಿಂಗಳ ಅಂತರದಲ್ಲಿ ಯಾಕೆ ಮತ್ತೆ ಸರ್ವೆ. ಅಷ್ಟು ಆತುರದ ಸರ್ವೆ ಯಾಕೆ? ಆಯೋಗದ ಬುಕ್‌ಲೆಟ್‌ನಲ್ಲಿ ಅನೇಕ ತಪ್ಪುಗಳಿವೆ. ಎರಡು ಸಲ ಬುಕ್‌ಲೆಟ್ ಮುದ್ರಣ ಮಾಡಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ ಸಿಎಂ ಕಡೆಯಿಂದ ಒತ್ತಡ ಇದೆ ಎನ್ನುತ್ತಾರೆ. ಸಿಎಂಗೆ ಏನೋ ಒಂದು ಹಿಡನ್ ಅಜೆಂಡಾ ಇದೆ ಎಂದು ವ್ಯಂಗ್ಯವಾಡಿದರು.