ಬೆಂಗಳೂರು, ಸೆ.21– ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ರಜೆಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ, ಬೇರೆ ರೀತಿಯಲ್ಲಿ ಒದಗಿಸಲು ಚಿಂತನೆ ನಡೆಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಮಕ್ಕಳ ಕಲಿಕೆಗೆಯಾವುದೇ ತೊಂದರೆಯಾಗುವುದಿಲ್ಲ. ದಸರಾ ರಜೆಯ ಸಂದರ್ಭದ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದರು.ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಧರ್ಮದ ಜೊತೆ ಉಪಜಾತಿಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಯಾರು ಟೇಬಲ್ ಕುಟ್ಟಿ ಮಾತನಾಡಿಲ್ಲ. ಅನಗತ್ಯವಾಗಿ ವದಂತಿಗಳನ್ನು ಹರಡಬಾರದು.
ಉಪಜಾತಿಗಳ ಸೇರ್ಪಡೆಯ ಬಗ್ಗೆ ನಾನು ಕೂಡ ಜನರ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಅದರಂತೆ ಮುಖ್ಯಮಂತ್ರಿಯವರು ಉಪ ಜಾತಿಗಳನ್ನು ಕೈಬಿಡಲು ನಿರ್ದೇಶನ ನೀಡಿದ್ದಾರೆ ಎಂದರು.
ಈ ಅವಧಿಯ ರಜೆಯನ್ನು ಶಿಕ್ಷಕರಿಗೆ ಬೇರೆ ರೀತಿ ಕಲ್ಪಿಸುವ ಬಗ್ಗೆ ಚಿಂತನೆಗಳಿವೆ. ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಸರ್ಕಾರ ಹೆಚ್ಚುವರಿ ಗೌರವ ಧನ ನೀಡಲಿದೆ. ಶಿಕ್ಷಕರ ಸಂಘದ ಮುಖಂಡರ ಜೊತೆಗೆ ಚರ್ಚೆ ನಡೆಸಲಾಗಿದೆ. ಸಮೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಮನವಿ ಮಾಡಿದ್ದೇನೆ ಎಂದರು.
ಶಿಕ್ಷಕರನ್ನು ಸಮೀಕ್ಷೆಗೆ ಬಳಸಬಾರದು ಎಂಬ ಚರ್ಚೆಗಳಿವೆ. ಆದರೆ ಇದಕ್ಕೆ ಪರ್ಯಾಯವಾಗಿ ಬೇರೆ ವ್ಯವಸ್ಥೆಗಳು ಈವರೆಗೂ ಸೃಷ್ಟಿಯಾಗಿಲ್ಲ. ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಹಾಗೂ ಜನಗಣತಿಗೆ ಶಿಕ್ಷಕರನ್ನಲ್ಲದೇ ಬೇರೆ ಯಾರನ್ನು ಬಳಸಿಕೊಳ್ಳುತ್ತಾರೆ ಎಂದು ಮಧುಬಂಗಾರಪ್ಪ ಪ್ರಶ್ನಿಸಿದರು.
ಸಮಾಜದಲ್ಲಿ ಸಮಾನತೆ ಬರಬೇಕಾದರೆ ಪ್ರತಿಯೊಬ್ಬರ ಸ್ಥಿತಿಗತಿಯ ಮಾಹಿತಿಗಳು ದೊರೆಯಬೇಕು. ಅದಕ್ಕಾಗಿ ಸಮೀಕ್ಷೆ ಅನಿವಾರ್ಯ ಎಂದ ಅವರು, ಶಿಕ್ಷಣ ಇಲಾಖೆಯಲ್ಲಿ ತಾವು ಸಚಿವರಾದ ಮೇಲೆ ಮಹತ್ವದ ಸುಧಾರಣೆಗಳನ್ನು ತಂದಿದ್ದೇನೆ ಎಂದರು.ರಾಜ್ಯದ ಬಜೆಟ್‌ನಲ್ಲಿ ಈ ಮೊದಲು 33,500 ಕೋಟಿ ರೂ. ಅನುದಾನವಿತ್ತು. ನಮ ಸರ್ಕಾರ ಬಂದಾಗ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಅದನ್ನು 37 ಸಾವಿರ ಕೋಟಿ. ರೂ.ಗಳಿಗೆ ಹೆಚ್ಚಿಸಲಾಗಿದೆ. ಈಗ 44 ಸಾವಿರ ಕೋಟಿಯಷ್ಟು ಅನುದಾನ ಒದಗಿಸಲಾಗಿದೆ.
ಬಜೆಟ್‌ನಲ್ಲಿ ಘೋಷಿಸಿದ 500 ಕರ್ನಾಟಕ ಪಬ್ಲಿಕ್ ಶಾಲೆಗಳ ಸಂಖ್ಯೆಯನ್ನು 800ಕ್ಕೆ ಹೆಚ್ಚಿಸಿದ್ದೇವೆ. ಇದೆಲ್ಲಾ ನಮ ಸಾಧನೆಯಲ್ಲವೇ? ಬಿಜೆಪಿಯವರಿಗೆ ಕಾಣುವುದಿಲ್ಲವೇ ಎಂದರು.
ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿ ಶೈಕ್ಷಣಿಕ ವೆಚ್ಚವಾಗಿ ಪ್ರತಿ ಮಗುವಿಗೆ 8 ಸಾವಿರದಿಂದ 5800 ರೂ. ವರೆಗೂ ಅನುದಾನ ನೀಡುತ್ತಿದೆ. ಅದರೆ ಕರ್ನಾಟಕ ವಿದ್ಯಾರ್ಥಿಗಳಿಗೆ 2800 ರೂ.ಗಳು ಮಾತ್ರ ನೀಡುತ್ತದೆ. ಇದನ್ನು ಸರಿ ಪಡಿಸಲು ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದ್ದರು.
ಬಿಜೆಪಿಯವರಿಗೆ ಸಮಾಜ ಹಾಗೂ ಅಭಿವೃದ್ಧಿಯ ಕಾಳಜಿ ಇರಲಿಲ್ಲ. ಗಣೇಶಹಬ್ಬ ಎಂದರೆ ಅವರಿಗೆ ಸುಗ್ಗಿ. ಗಲಾಟೆಯ ಹಬ್ಬವನ್ನಾಗಿ ಪರಿವರ್ತನೆ ಮಾಡುತ್ತಾರೆ. ಈ ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ತಮ ಆಚರಣೆಗಳನ್ನು ಮಾಡಲು ಅವಕಾಶಗಳಿವೆ. ಆದರೆ ಬಿಜೆಪಿಯವರು ಕೋಮು ಭಾವನೆಗಳನ್ನು ಪ್ರಚೋದಿಸಿ ಸಮಾಜವನ್ನು ಒಡೆದಾಳುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ಬ್ರಿಟಿಷರು ಇದೇ ರೀತಿಯ ಕುತಂತ್ರ ಮಾಡಿದ್ದರು. ಭಾರತೀಯ ಜನತಾಪಾರ್ಟಿ ಒಡೆದಾಳುವ ನೀತಿಗಾಗಿ ಬ್ರಿಟಿಷ್ ಜನತಾಪಾರ್ಟಿ ಎಂದು ಗುರುತಿಸಿಕೊಂಡಿದೆ ಎಂದು ಕಿಡಿ ಕಾರಿದರು.
ಬಿಜೆಪಿಯವರ ನಿಲುವುಗಳು ಜನಪರವಾಗಿಲ್ಲ, ರಾಜ್ಯದಲ್ಲಷ್ಟೇ ಅಲ್ಲ ವಿದೇಶಾಂಗ ವ್ಯವಹಾರದಲ್ಲೂ ಭಾರತೀಯರಿಗೆ ಮಾರಕವಾದ ವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅಮೆರಿಕಾ ಅಧ್ಯಕ್ಷರನ್ನು ತಬ್ಬಿಕೊಂಡು, ಶೇಕ್ ಹ್ಯಾಂಡ್ ಮಾಡಿ, ವಾಕಿಂಗ್ ಮೂಲಕ ಚಾಯ್ ಪಾರ್ಟಿ ಮಾಡಿದ್ದರು. ಆದರೆ ಈಗ ಅದೇ ಟ್ರಂಪ್ ಭಾರತೀಯರ ವೀಸಾ ಶುಲ್ಕವನ್ನು ಒಂದು ಲಕ್ಷ ಡಾಲರ್ ಹೆಚ್ಚಿಸಿದ್ದಾರೆ. ಟ್ರಂಪ್ ಉಲ್ಟಾ ಹೊಡೆದಾಕ್ಷಣ ಮೋದಿ ಚೀನಾ ಜೊತೆ ಸಂಬಂಧ ಬೆಳೆಸಲು ಹೋಗುತ್ತಾರೆ. ಆ ದೇಶದಿಂದ ಗಡಿಯಲ್ಲಿ ಗಲಾಟೆಯಾದರೆ ಟಿಕ್‌ಟಾಕ್ ನಿಷೇಧಿಸುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಅಭಿವೃದ್ಧಿಗಿಂತಲೂ ಲೂಟಿ ಹೊಡೆಯುವುದಕ್ಕೆ ಹೆಚ್ಚು ಪ್ರಖ್ಯಾತಿ. ಅಧಿಕಾರ ಸಿಕ್ಕಾಗ ಶೇ.40 ರಷ್ಟು ಕಮಿಷನ್ ಎಂಬ ಸಗಣಿ ತಿಂದಿದ್ದಾರೆ ಎಂದು ಹರಿಹಾಯ್ದರು.