ಮೈಸೂರು,ಸೆ.22- ವಿಶ್ವಖ್ಯಾತ ಮೈಸೂರು ದಸರಾಗೆ ಬೂಕರ್ ಪ್ರಶಸ್ತಿ ಪುರಸ್ಕøತೆ, ಸಾಹಿತಿ ಬಾನು ಮುಷ್ತಾಕ್ ಅವರು ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಪ್ರದಾಯಬದ್ಧವಾಗಿ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಮತ್ತಿತರ ಗಣ್ಯರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿರುವ ವಿಘ್ನ ನಿವಾರಕ ಗಣೇಶನಿಗೆ ನಮಿಸಿ ನಂತರ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ತಾಯಿ ಚಾಮುಂಡೇಶ್ವರಿಗೆ ಇಂದು ಬೆಳಿಗ್ಗಿನಿಂದಲೇ ದೇವೀ ಕೆರೆಯಿಂದ ಜಲವನ್ನು ತಂದು ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದರು.
ದೇವಾಲಯವನ್ನು
ವಿವಿಧಹೂ ಹಾಗೂ ಕಬ್ಬಿನ ಜಲ್ಲೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಿಗೆ ಇಂದು ಬ್ರಾಹ್ಮಿ ಅಲಂಕಾರ ಮಾಡಲಾಗಿದ್ದು, ಪ್ರಧನ ಅರ್ಚಕರಾದ ಶಶಿಶೇಖರ ದೀಕ್ಷಿತ್‍ರವರು ಸಂಕಲ್ಪವನ್ನು ಮಾಡಿ ಮಹಾಮಂಗಳಾರತಿ ನೆರವೇರಿಸಿದರು. ಮಂಗಳಾರತಿ ಸ್ವೀಕರಿಸಿದ ವೇಳೆ ಬಾನು ಮುಷ್ತಾಕ್‍ರವರು
ಭಾವುಕರಾದರು. ನಂತರ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಷ್ತಾಕ್‍ರವರು ಅರ್ಚಕರಿಂದ ಹೂವಿನ ಹಾರವನ್ನು ಸ್ವೀಕರಿಸಿದರು. ದೇವಿ ಪೂಜೆ ಹಾಗೂ ದಸರಾ ಉದ್ಘಾಟನೆಗೆ ಅರಿಶಿನ ಬಣ್ಣದ ಸೀರೆ ಹಾಗೂ ಹಸಿರು ಬಣ್ಣದ ರವಿಕೆ ತೊಟ್ಟು, ಹೂ ಮುಡಿದಿದ್ದು ವಿಶೇಷವಾಗಿತ್ತು.
ನಂತರ ದೇವಾಲಯದ ಆವರಣದಲ್ಲಿ ನಿರ್ಮಾಣ ಮಾಡಲಾಗಿದ್ದ ಬೃಹತ್ ವೇದಿಕೆಯತ್ತ ಆಗಮಿಸಿದ ಬಾನು ಮುಷ್ತಾಕ್‍ರವರಿಗೆ ಮೈಸೂರು ಪೇಟ ಹಾಗೂ ಶಾಲು ಹೊದಿಸಿ ಹಾಗೂ ಮರದ ಅಂಬಾರಿಯ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಬೆಳಿಗ್ಗೆ 10.10 ರಿಂದ 10.40ರ ವೃಶ್ಚಿಕ ಲಗ್ನದಲ್ಲಿ ಬೆಳ್ಳಿರಥದಲ್ಲಿ ಅಲಂಕೃತಗೊಂಡಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಾಹಿತಿ ಬಾನು ಮುಷ್ತಾಕ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಸಚಿವರುಗಳಾದ ವೆಂಕಟೇಶ್, ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಎಚ್.ಕೆ.ಪಾಟೀಲ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಶ್ರೀವತ್ಸ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಮತ್ತಿತರ ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.