ಬೆಂಗಳೂರು,ಸೆ.22- ರಾಜ್ಯಸರ್ಕಾರದ ಜಾತಿ ಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ಬ್ರಾಹಣ ಮಹಾಸಭಾ ಒಕ್ಕಲಿಗರ ಸಂಘ ಹಿರಿಯ ವಕೀಲ ಸುಬ್ಬಾರೆಡ್ಡಿ ಅವರು ಜಾತಿಗಣತಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಬೂಬಖ್ರು, ನ್ಯಾಯಮೂರ್ತಿ ಸಿ.ಎಂ. ಜೋಷಿ ಅವರಿದ್ದ ಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿ ರಾಜ್ಯಸರ್ಕಾರ ಜಾತಿಗಣತಿಗೆ ಆದೇಶಿಸಿದೆ. ಇದು ಸಂವಿಧಾನದ ಆರ್ಟಿಕಲ್ 342 ಎ (3ಎ)ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಈ ಹಿಂದಿನ ವರದಿ ಪರಿಗಣಿಸದೆ ಹೊಸ ಪ್ರಕ್ರಿಯೆಯನ್ನು ಆರಂಭಿಸಿದೆ. ಜಾತಿಗಣತಿಯ ಅಂಕಿ ಅಂಶಗಳನ್ನು ಆಧಾರ್‌ಗೆ ಲಿಂಕ್ ಮಾಡುತ್ತಿದ್ದಾರೆ. ಜಿಯೋ ಟ್ಯಾಗಿಂಗ್ ಮಾಡಿ ಆಧಾರ್ ಲಿಂಕ್ ಮಾಡುತ್ತಿರುವ ಸರ್ಕಾರದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಪ್ರಬಲ ವಾದ ಮಂಡಿಸಿದರು.
ಜನಗಣತಿಯನ್ನು ಕೇಂದ್ರ ಸರ್ಕಾರ ಮಾತ್ರ ಮಾಡಬೇಕು. ರಾಜ್ಯಸರ್ಕಾರ ಮಾಡುತ್ತಿರುವ ಸರ್ವೆ ಜನಗಣತಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ವಾದ ಮಂಡಿಸಿದರು. ಸರ್ಕಾರ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿದೆ. ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹಣ ಕ್ರಿಶ್ಚಿಯನ್ ಎಂದು ವಿಂಗಡಿಸಿ ಯಾವುದೇ ಅಂಕಿ ಅಂಶದ ವಿಶ್ಲೇಷಣೆ ಇಲ್ಲದೆಯೇ ಜನಗಣತಿ ಮಾಡಲು ರಾಜ್ಯಸರ್ಕಾರ ಯಾವುದೇ ಅಧಿಕಾರವಿಲ್ಲವೆಂದು ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿಯವರು ಹೇಳಿದರು.
ಅರ್ಜಿದಾರರ ಪರ ವಿವೇಕ್‌ರೆಡ್ಡಿ ವಾದ ಮಂಡಿಸಿ, ರಾಜಕೀಯ ಉದ್ದೇಶದಿಂದ ರಾಜ್ಯಸರ್ಕಾರ ಈ ಗಣತಿ ಮಾಡುತ್ತಿದೆ. ರಾಜ್ಯದ ಜನರ ಸ್ಥಿತಿಗತಿ ಪರಿಶೀಲನೆ, ಹಿಂದುಳಿದ ವರ್ಗಗಳ ಕರ್ತವ್ಯವಲ್ಲ. ಹಾಗಾಗಿ ತಡೆ ನೀಡಬೇಕೆಂದು ಮನವಿ ಮಾಡಿದರು. ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು, ನಾವು ಜನಗಣತಿ ಮಾಡುತ್ತಿಲ್ಲ. ಕೇವಲ ಸಮೀಕ್ಷೆ ಮಾಡುತ್ತಿದ್ದೇವೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಹೀಗಾಗಿ ಯಾವುದೇ ರೀತಿ ತಡೆ ನೀಡಬಾರದು ಎಂದು ಮನವಿ ಮಾಡಿದರು.
ಅಂಕಿ ಅಂಶ ಸಂಗ್ರಹಿಸಲು ರಾಜ್ಯಸರ್ಕಾರಕ್ಕೆ ಅಧಿಕಾರವಿದೆ. ಸಮೀಕ್ಷೆ ಮೂಲಕ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. 2014 ರ ಸರ್ವೆಯ ಅಂಕಿ ಅಂಶಗಳ ಮಾಹಿತಿಯನ್ನೂ ಕೂಡ ಅಪ್ಡೇಟ್ ಮಾಡುತ್ತಿದ್ದೇವೆ. ಹಳೆಯ ಸರ್ವೆಯನ್ನು ಕೈಬಿಟ್ಟಿಲ್ಲವೆಂದು ಹೇಳಿದರು. ಶಿಕ್ಷಕರು, ಆಶಾ ಕಾರ್ಯಕರ್ತೆಯರ ಮೂಲಕ 420 ಕೋಟಿ ರೂ. ವೆಚ್ಚದಲ್ಲಿ ಸರ್ವೆ ಮಾಡಲಾಗುತ್ತಿದೆ. ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲು ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ಮಧ್ಯಂತರ ತಡೆ ನೀಡಬಾರದು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿದರು.