Tuesday, September 23, 2025
Homeರಾಜ್ಯಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಗೆ ಕಾಲಮಿತಿ ನಿಗದಿಪಡಿಸಿಲ್ಲ : ಪರಮೇಶ್ವರ್

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಗೆ ಕಾಲಮಿತಿ ನಿಗದಿಪಡಿಸಿಲ್ಲ : ಪರಮೇಶ್ವರ್

No time limit set for SIT investigation into Dharmasthala case: - Parameshwar

ಬೆಂಗಳೂರು, ಸೆ.23- ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ಮುಂದುವರೆಯಲಿದೆ. ಕಾಲಮಿತಿ ನಿಗದಿ ಪಡಿಸಿ, ಮಧ್ಯಂತರ ವರದಿ ಪಡೆಯುವುದು ಅಥವಾ ತನಿಖೆಯನ್ನುಸಿಐಡಿಗೆ ವಹಿಸುವುದು ಸೇರಿದಂತೆ ಯಾವುದೇ ರೀತಿಯ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಪ್ರಕರಣ. ಸತ್ಯವನ್ನು ಹೊರ ತರುವ ಸಂದರ್ಭದಲ್ಲಿ ಯಾರಿಗಾದರೂ ತೊಂದರೆಗಳಿದ್ದರೆ, ಪ್ರಾಣ ಭಯ ಅಥವಾ ಇನ್ನಿತರ ಆತಂಕಗಳಿದ್ದರೆ, ಸರ್ಕಾರ ಅಗತ್ಯ ಭದ್ರತೆಯನ್ನು ಒದಗಿಸಲಿದೆ ಎಂದು ಹೇಳಿದರು. ಚಿನ್ನಯ್ಯ ಅವರ ಪತ್ನಿ ಪ್ರಾಣ ಭಯ ಇದೆ ಎಂದು ರಕ್ಷಣೆ ಕೋರಿದ್ದರೆ, ಪೊಲೀಸರು ಅಗತ್ಯ ಕ್ರಮಕೈಗೊಳ್ಳುತ್ತಾರೆ. ಪ್ರಕರಣವನ್ನು ಸಿಐಡಿಗೆ ಕೊಡುವ ಚರ್ಚೆ ನಡೆದಿಲ್ಲ, ಎಸ್‌ಐಟಿ ತನಿಖೆಯೇ ಮುಂದುವರೆಯುತ್ತದೆ ಎಂದರು.

- Advertisement -

ಮಧ್ಯಂತರ ವರದಿ ಅಥವಾ ಚಾರ್ಜ್‌ ಶೀಟ್ ಪಡೆಯುವ ಸಾಧ್ಯತೆಗಳಿಲ್ಲ. ತನಿಖೆಯನ್ನು ಶೀಘ್ರ ಮುಗಿಸುವಂತೆ ಹೇಳಿದ್ದೇವೆ. ಆದರೆ ಕಾಲಮಿತಿಯನ್ನು ವಿಧಿಸಿಲ್ಲ. ಲಭ್ಯವಿರುವ ಪುರಾವೆ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಶೀಘ್ರ ವರದಿ ನೀಡುವಂತೆ ಸೂಚಿಸಿದ್ದೇವೆ ಎಂದರು.

ದಸರಾ ಮಹೋತ್ಸವದ ವಿಷಯವಾಗಿ ಬಹಳ ದಿನಗಳಿಂದ ಇದ್ದ ಗೊಂದಲ ನಿನ್ನೆ ನಿವಾರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ಕಾಕ್ ವಿಧ್ಯುಕ್ತವಾಗಿ ದಸರಾವನ್ನು ಉದ್ಘಾಟಿಸಿದ್ದಾರೆ. ಇದು ನಾಡಿಗೆ ಮಾದರಿಯಾಗಿದೆ ಎಂದರು.

ರಾಜ್ಯಕ್ಕೆ ಒಳ್ಳೆಯದಾಗಲಿ, ಸರ್ವರಿಗೂ ಮಂಗಳವಾಗಲಿ ಎಂದು ಬಾನು ಮುಪ್ತಾಕ್ ಹಾಗೂ ಮುಖ್ಯಮಂತ್ರಿಯವರು ಪುಷ್ಪಾರ್ಚನೆ ಮಾಡಿ ಪ್ರಾರ್ಥಿಸಿದ್ದಾರೆ. ಯಾವುದೇ ಧರ್ಮವಾಗಿದ್ದರೂ ನೆಮ್ಮದಿ, ಮನಃಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡುವುದು ಸಹಜ. ಯಾವುದೇ ವ್ಯತ್ಯಾಸ ಹಾಗೂ ಗೊಂದಲಗಳಿಲ್ಲದೆ ದಸರಾ ಉದ್ಘಾಟನೆಯಾಗಿದೆ ಎಂದರು. ಹಿಂದೂ ಧರ್ಮದ ಮೂಲವೇ ಸರ್ವರನ್ನೂ ಒಳಗೊಳ್ಳುವುದಾಗಿದೆ. ಸಂವಿಧಾನಾತ್ಮಕವಾಗಿಯೂ ಇದೇ ಆಶಯವಿದೆ. ಧಾರ್ಮಿಕ ಸಾರಾಂಶವೂ ಭಾವೈಕ್ಯವಾಗಿದೆ. ಆದೇ ರೀತಿ ಮೈಸೂರಿನಲ್ಲಿ ನಡೆದಿದೆ ಎಂದರು.

ತುಮಕೂರಿನಲ್ಲಿ ನಡೆಯುತ್ತಿರುವ ನವರಾತ್ರಿ ಹಾಗೂ ದಸರಾ ಆಚರಣೆಯ ಎರಡನೇ ದಿನವಾದ ಇಂದು ಧಾರ್ಮಿಕ ಆಚರಣೆಗಳಲ್ಲಿ ತಾವು ಕುಟುಂಬ ಸಮೇತರಾಗಿ ಭಾಗವಹಿಸಿದ್ದು, ರಾಜ್ಯದಲ್ಲಿ ಮಳೆ ಬೆಳೆಯಾಗಿ ಸುಭಿಕ್ಷೆ ನೆಲೆಸಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ. ನನ್ನ ಶ್ರೀಮತಿ ಅವರು ಪೂಜೆ ಮಾಡುತ್ತಾರೆ. ಇಲ್ಲಿ ಬ್ರಹ್ಮಚರ್ಯೆಯ ಆರಾಧ್ಯ ದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಶ್ನಿಸಿ, ಬಹಳಷ್ಟು ಮಂದಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಯಾವ ರೀತಿಯ ತೀರ್ಪು ಹೊರ ಬರಲಿದೆ ಎಂದು ಕಾದು ನೋಡುತ್ತೇವೆ ಎಂದರು. ಸಚಿವ ಸಂಪುಟಸಭೆ ಪುನರ್‌ರಚನೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News