ಬೆಂಗಳೂರು, ಸೆ.23– ನಾನಾ ರೀತಿಯ ಗೊಂದಲ, ತಾಂತ್ರಿಕ ಸಮಸ್ಯೆ, ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ನಿರುತ್ಸಾಹ ಮೊಬೈಲ್ ಆ್ಯಪ್‌ನ ಜಂಜಾಟಗಳ ನಡುವೆ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ.
ನಿನ್ನೆಯಿಂದ ಆರಂಭವಾಗಿರುವ ಸಮೀಕ್ಷೆ ಅ.7ರ ವರೆಗೂ ನಡೆದು , ಒಟ್ಟು 2 ಕೋಟಿ ಮನೆಗಳ 7 ಕೋಟಿಗೂ ಅಧಿಕ ಜನರ ದತ್ತಾಂಶವನ್ನು ಸಂಗ್ರಹಿಸಬೇಕಿದೆ. ಆದರೆ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದೆ ಗೊಂದಲಮಯವಾಗಿದೆ ಹಾಗೂ ಜನ ಸಾಮಾನ್ಯರನ್ನು ರೇಜಿಗಿಡಿಸಿದೆ. ಹಲವು ಸಮುದಾಯಗಳ ವಿರೋಧದ ನಡುವೆ ಕೂಡ ಹಠಕ್ಕೆ ಬಿದ್ದಂತೆ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜನರಲ್ಲಿ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ.
ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇ. 20ಕ್ಕೂ ಹೆಚ್ಚು ಪಾಲು ಹೊಂದಿರುವ ಬೆಂಗಳೂರಿನಲ್ಲಿ ಈವರೆಗೂ ಸಮೀಕ್ಷೆ ಆರಂಭಗೊಂಡಿಲ್ಲ, ಬಹುತೇಕ ಸಮೀಕ್ಷಾದಾರರಿಗೆ ತರಬೇತಿಯನ್ನು ನೀಡಿಲ್ಲ. ಈ ಹಿಂದೆ ನ್ಯಾ.ನಾಗಮೋಹನದಾಸ್ ಆಯೋಗದ ಸಮೀಕ್ಷೆಯಲ್ಲೂ ಇದೇ ರೀತಿಯ ಅನಾದಾರಣೆಗಳು ಕಂಡು ಬಂದಿತ್ತು. ಕೊನೆ ಕೊನೆಗೆ ಅಧೋಗತಿಯಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಿ, ವರದಿ ನೀಡಿದ್ದು ಕಂಡು ಬಂತು.
ಕೊನೆಯ ಹಂತದಲ್ಲಿ ಹೆಚ್ಚು ಮನೆಗಳನ್ನು ತಲುಪಬೇಕು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ಸಮೀಕ್ಷಾದಾರರ ಮೇಲೆ ಒತ್ತಡ ಹೇರಿದರು. ಇದು ಹೇಗೊ ಮುಗಿದರೆ ಸಾಕು ಎಂಬ ಅಸಡ್ಡೆಯಲ್ಲಿ ಸಮೀಕ್ಷಾದಾರರು ದೂರವಾಣಿಯಲ್ಲೇ ಮಾಹಿತಿ ಪಡೆದು ಕೈತೊಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ ನ್ಯಾ.ನಾಗಮೋಹನದಾಸ್ ಸಮೀಕ್ಷೆ ಗೊಂದಲದ ಗೂಡಾಗಿದ್ದು, ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಈಗ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಪ್ರತಿಯೊಬ್ಬ ಸಮೀಕ್ಷಾದಾರರಿಗೂ ಸುಮಾರು 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್ ಆ್ಯಪ್ ಹ್ಯಾಂಗ್ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.
ಅಗತ್ಯವಾದರೆ ಒಂದೆರಡು ದಿನ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ವರೆಗೂ ಸಮೀಕೆ್ಷಯೇ ಶುರುವಾಗಿಲ್ಲ. ಈಗಾಗಲೇ ದಸರಾ ರಜೆ ಆರಂಭಗೊಂಡಿದ್ದು ಬಹುತೇಕರು ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವರು ಊರುಗಳಿಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಹಿತಿ ಕಲೆ ಹಾಕುವುದು ದುಸ್ತರವಾದ ಕೆಲಸ ಆಗಿದ್ದರೂ ಆಯೋಗ ಎಚ್ಚೆತ್ತುಕೊಳ್ಳದೆ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸದೇ ವಿಳಂಬ ಮಾಡುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ಆಕ್ಷೇಪಗಳಿವೆ. ಬಹುತೇಕ ಕ್ಷೇತ್ರಗಳಲ್ಲಿ ಸಮೀಕ್ಷೆಯ ಗೊಂದಲಗಳು ತೀವ್ರವಾಗಿವೆ. ರಾಜ್ಯಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ಎಲ್ಲವೂ ಸುಖಾಂತ್ಯವಾಗಿ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದೆ.
ಇತ್ತ ಓಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದೆ ಶಿಕ್ಷಕರು, ಆಶಾ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಸಮೀಕ್ಷಾದಾರರು ಭೇಟಿ ನೀಡುವ ಮೂರು ದಿನ ಮುಂಚಿತವಾಗಿಯೇ ಪ್ರಶ್ನಾವಳಿಗಳ ನಮೂನೆಗಳನ್ನು ಮನೆ ಮನೆಗಳಿಗೆ ತಲುಪಿಸಲಾಗುವುದೆಂದು ಆಯೋಗ ಹೇಳಿತ್ತು. ಆದರೆ ಎಲ್ಲಿಯೂ ಪ್ರಶ್ನಾವಳಿಗಳನ್ನು ತಲುಪಿಸಿದ ಉದಾಹರಣೆ ಇಲ್ಲ.
ಇನ್ನೂ ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ. ಅಸಂಬದ್ಧವಾದ ಸಮೀಕ್ಷೆ ನಡೆಸುವ ಬದಲಾಗಿ 3 ತಿಂಗಳ ಕಾಲ ಮುಂದೂಡುವಂತೆ ಜನ ಸಮುದಾಯ ಒತ್ತಡ ಹೇರಿದರೂ ಸರ್ಕಾರ ಅದನ್ನು ಪರಿಗಣಿಸದೆ ಸಮೀಕ್ಷೆ ಮಾಡಿಯೇ ತೀರುವುದಾಗಿ ಪಟ್ಟು ಹಿಡಿದಿದೆ.
ಈ ಮೊದಲು ಕಾಂತರಾಜು ಆಯೋಗದ ಸಮೀಕ್ಷೆಯ ವೇಳೆಯೂ ಇದೇ ರೀತಿಯ ಮೊಂಡು ಹಠ ಕಂಡು ಬಂದಿತ್ತು. ಕೊನೆಗೂ ಆ ವರದಿ 10 ವರ್ಷ ಆದರೂ ಅನುಷ್ಠಾನಗೊಳ್ಳದೆ ಮೂಲೆಗುಂಪಾಯಿತು. ಸುಮಾರು 175 ಕೋಟಿ ರೂ. ವ್ಯರ್ಥವಾಯಿತು. ಈಗ ಜನ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸಿ, ಮತ್ತೆ ಸಮೀಕ್ಷೆಯನ್ನು ಮಾಡಿಯೇ ತೀರುವುದಾಗಿ ಸರ್ಕಾರ ಹಠಕ್ಕೆ ಬಿದ್ದಿದೆ. ಇದು ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.