ಬೆಂಗಳೂರು,ಸೆ.23- ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಒಂದು ಟಿಕೆಟ್‌ನ ಬೆಲೆ 200 ರೂಪಾಯಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ಕಾಯ್ದಿರಿಸಿದ ತೀರ್ಪನ್ನು ಪ್ರಕಟಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ರವಿ ಹೊಸಮನಿ ನೇತೃತ್ವದ ಪೀಠವು, ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಜೊತೆಗೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆದಿತ್ತು. ಹತ್ತಾರು ಬಾರಿ ಈ ವಿಚಾರವಾಗಿ ಚರ್ಚೆ, ವಾದ- ಪ್ರತಿವಾದಗಳು ನಡೆದಿದ್ದವು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿತ್ತು. ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ಜಾರಿಗೆ ತಂದಿದ್ದ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆಯಾದ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಹೈಕೋರ್ಟ್ ಮೊರೆ ಹೋಗಿತ್ತು.
ಮಲ್ಟಿಪ್ಲೆಕ್‌್ಸ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್‌್ಸ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್ಟೈನೆಂಟ್, ವಿ ಕೆ ಫಿಲ್‌್ಸ ಮತ್ತು ಸಿನಿಪ್ಲೆಕ್‌್ಸ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ಭಾಗವಾಗಿ ಮಧ್ಯಂತರ ಕೋರಿಕೆಗೆ ಸಂಬಂಧಿಸಿದ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯ ಪ್ರಕಟಿಸಿದೆ,
ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025ಕ್ಕೆ ತಡೆ ಕೋರಿರುವ ಮಧ್ಯಂತರ ಕೋರಿಕೆಯನ್ನು ಪುರಸ್ಕರಿಸಲಾಗಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಕಳೆದ ವಿಚಾರಣೆಯಲ್ಲಿ ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಸಿನಿಮಾ ವೀಕ್ಷಕರು ಮತ್ತು ಸಿನಿಮಾ ಪ್ರದರ್ಶಕರ ಆಯ್ಕೆಯ ಹಕ್ಕಿನ ವಿಚಾರ ಇಲ್ಲಿದೆ. ಈ ಹಿಂದೆ ಸರ್ಕಾರವು ಇಂಥದ್ದೇ ಆದೇಶವನ್ನು ಹಿಂಪಡೆದಿತ್ತು. ಈಗ ಮತ್ತದೇ ಆದೇಶವನ್ನು ಹೊರಡಿಸಲಾಗಿದೆ. 2017ರಲ್ಲಿ ರಾಜ್ಯ ಸರ್ಕಾರ ಇಂಥದ್ದೇ ಆದೇಶ ಮಾಡಿತ್ತು. ಈಗ ನಿಯಮಗಳಿಗೆ ತಿದ್ದುಪಡಿ ಮಾಡಿ ಸಿನಿಮಾ ದರ ನಿಗದಿಪಡಿಸಲಾಗಿದ್ದು, ಇತಿಹಾಸ ಮರುಕಳಿಸಿದೆ” ಎಂದಿದ್ದರು.
ಸಿನಿಮಾ ಹಾಲ್‌ಗಳನ್ನು ರೂಪಿಸಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಇಂತಿಷ್ಟೇ ಸೀಟುಗಳಿಗೆ ಸೀಮಿತಗೊಳಿಸಿ ಅಗತ್ಯ ಸೌಲಭ್ಯಗಳೊಂದಿಗೆ ಸಿನಿಮಾ ಹಾಲ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸರ್ಕಾರವು 200 ರೂಪಾಯಿ ಅಥವಾ ಇಂತಿಷ್ಟೇ ದರಕ್ಕೆ ಟಿಕೆಟ್ ಮಾರಾಟ ಮಾಡಬೇಕು ಎಂದು ಹೇಳಲಾಗದು. ಕರ್ನಾಟಕ ಸಿನಿಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು-2025ರಡಿ ದರ ನಿಗದಿಯು ಕಾನೂನುಬಾಹಿರ ಕ್ರಮವಾಗಿದೆ ಎಂದಿದ್ದರು.
ಇತರೆ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ, ಧ್ಯಾನ್ ಚಿನ್ನಪ್ಪ ಮತ್ತು ಡಿ ಆರ್ ರವಿಶಂಕರ್ ಅವರು ಯಾವುದೇ ದತ್ತಾಂಶ ಮತ್ತು ಕಾನೂನಿನ ನೆರವು ಇಲ್ಲದೇ ಸರ್ಕಾರವು ಟಿಕೆಟ್ ದರ ಮಿತಿ ಹೇರಿದೆ. ಇದು ಸ್ವೇಚ್ಛೆಯ ಕ್ರಮವಾಗಿದ್ದು, ಅರ್ಜಿದಾರರ ಹಕ್ಕನ್ನು ಕಸಿಯಲಾಗಿದೆ ಎಂದಿದ್ದರು.