ಬೆಂಗಳೂರು,ಸೆ.23-ವಿಲಾಸಿ ಜೀವನ ನಡೆಸಲು ಅರ್ಚಕನಂತೆ ದೇವರ ಗರ್ಭಗುಡಿಗೆ ಪ್ರವೇಶಿಸಿ ದೇವರ ವಿಗ್ರಹಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ, 14 ಲಕ್ಷ ಮೌಲ್ಯದ 5ಕೆಜಿ ಬೆಳ್ಳಿ ವಸ್ತುಗಳು , 67 ಗ್ರಾಂ ಚಿನ್ನಾಭರಣ ಹಾಗೂ ಹಿತ್ತಾಳೆ,ತಾಮ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಸಂತೋಷ್ ಅಲಿಯಾಸ್ ಕೆಜಿಎಫ್ (31) ಮತ್ತು ಹೆಬ್ಬಗೋಡಿಯ ಪ್ರವೀಣ್‌ಭಟ್ (51) ಬಂಧಿತ ಆರೋಪಿಗಳು. ಈ ಇಬ್ಬರು ದ್ವಿಚಕ್ರ ವಾಹನ ಕಳ್ಳತನ ಮಾಡಿ ಆ ವಾಹನದಲ್ಲೇ ವಿವಿಧ ದೇವಸ್ಥಾನಗಳಿಗೆ ಸುತ್ತಾಡಿ ಕಳ್ಳತನ ಮಾಡುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಿ ಮಹಾಗಣಪತಿ ದೇವಸ್ಥಾನಕ್ಕೆ ಅರ್ಚಕನ ವೇಷದಲ್ಲಿ ಗರ್ಭಗುಡಿಗೆ ಹೋದ ವ್ಯಕ್ತಿ ದೇವರ ಮೈ ಮೇಲೆ ಇದ್ದ ಆಭರಣಗಳು, ದೀಪಾಲೆ ಕಂಬಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ದೇವಸ್ಥಾನದ ಅಧ್ಯಕ್ಷರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಮಾಹಿತಿಯನ್ನು ಕಲೆಹಾಕಿ ಗೊಟ್ಟಿಗೆರೆ ಬಳಿ ದ್ವಿಚಕ್ರ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಸಿದಾಗ ದೇವಸ್ಥಾನದಲ್ಲಿ ಕಳ್ಳತನ ಮಾಡಿರು ವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ, ವಿಲಾಸಿ ಜೀವನ ನಡೆಸಲು ನಗರದ ವಿವಿಧ ದೇವಸ್ಥಾನಗಳ ಬೀಗ ಮುರಿದು ದೇವರ ಮೂರ್ತಿಗೆ ತೊಡಿಸಿದ್ದ ಚಿನ್ನ, ಬೆಳ್ಳಿ ವಸ್ತುಗಳು ಹಾಗೂ ಹುಂಡಿ ಹಣ ಕಳವು ಮಾಡಿರುವುದಾಗಿ ಹೇಳಿದ್ದಾರೆ.
ಆರೋಪಿಗಳಿಬ್ಬರಿಂದ ಸುಮಾರು 14 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ವಸ್ತುಗಳು, 67 ಗ್ರಾಂ ಚಿನ್ನಾಭರಣ, 1.426 ಕೆಜಿ ಹಿತ್ತಾಳೆ ವಸ್ತುಗಳು ಹಾಗೂ 353 ಗ್ರಾಂ ತಾಮ್ರದ ವಸ್ತುಗಳು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಕೊಟ್ರೇಶಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ. ಆರೋಪಿಗಳಿಬ್ಬರ ಬಂಧನದಿಂದ ಬನಶಂಕರಿ ಪೊಲೀಸ್‌ಠಾಣೆಯ ಎರಡು ದೇವಸ್ಥಾನ ಕಳವು ಪ್ರಕರಣಗಳು, ಜಯನಗರ, ಸುಬ್ರಹಣ್ಯಪುರ,ಕುಮಾರಸ್ವಾಮಿ ಲೇಔಟ್, ರಾಜರಾಜೇಶ್ವರಿ ಠಾಣೆ, ಕಾಡುಗೊಂಡನಹಳ್ಳಿ, ಕೆಂಗೇರಿ, ಸಂಪಿಗೆ ಹಳ್ಳಿ, ತಲಘಟ್ಟಪುರ, ಜಿಗಣಿ ಪೊಲೀಸ್ ಠಾಣೆಯ ತಲಾ ಒಂದು ದೇವಸ್ಥಾನ ಕಳವು ಪ್ರಕರಣಗಳು ಹಾಗೂ ಗಿರಿನಗರ ಪೊಲೀಸ್ ಠಾಣೆಯ ಎರಡು ದೇವಸ್ಥಾನ ಕಳವು ಸೇರಿ ಒಟ್ಟು 13 ಪ್ರಕರಣಗಳು ಪತ್ತೆಯಾಗಿರುತ್ತವೆ.