ಬೆಂಗಳೂರು, ಸೆ.23- ರಾಜಧಾನಿ ಬೆಂಗಳೂರಿನಲ್ಲಿರುವ ರಸ್ತೆಗುಂಡಿಗಳನ್ನು ವೈಭವೀಕರಿಸುವವರು ಒಮೆ ದೆಹಲಿಗೆ ಹೋಗಿ ನೋಡಲಿ. ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮನೆಯ ರಸ್ತೆಯಲ್ಲಿ ಎಷ್ಟು ಗುಂಡಿಗಳು ಇವೆ ಎಂಬುದನ್ನು ಎಣಿಸಲಿ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನಾವು ನಮ ಕರ್ತವ್ಯವನ್ನು ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಮಳೆಯ ನಡುವೆಯೂ ದಿನವೊಂದಕ್ಕೆ ಪ್ರತಿಯೊಂದು ಪಾಲಿಕೆ ವ್ಯಾಪ್ತಿಯಲ್ಲಿ 200 ರಂತೆ ಒಂದು ಸಾವಿರ ರಸೆ್ತಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಷ್ಟೇ ಗುಂಡಿಗಳಿಲ್ಲ, ದೇಶಾದ್ಯಂತ ಇದು ಸಾಮಾನ್ಯ. ಬೇರೆ ಬೇರೆ ರಾಜ್ಯಗಳಲ್ಲೂ ಈ ಸಮಸ್ಯೆಯಿದೆ. ಅಷ್ಟೇ ಏಕೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವ್ಯಾಪಕವಾದ ಗುಂಡಿಗಳಿವೆ ಎಂದು ಹೇಳಿದರು.
ಮಾಧ್ಯಮಗಳು ಹಾಗೂ ದೊಡ್ಡ ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲೇ ಗುಂಡಿಗಳಿವೆಯೆಂಬಂತೆ ವೈಭವೀಕರಿಸಿ ಕೆಟ್ಟ ಹೆಸರು ತರುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ ಎಂದು ಸಲಹೆ ನೀಡಿದರು.
ವಿರೋಧ ಪಕ್ಷ ಬಿಜೆಪಿಯವರು ಇದನ್ನೇ ದೊಡ್ಡದು ಮಾಡಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ, ಈಗ ಸಮಸ್ಯೆ ಏಕೆ ಬರುತ್ತಿತ್ತು? ಚುನಾವಣೆ ಹತ್ತಿರ ಇದೆ ಎಂಬ ಕಾರಣಕ್ಕೆ ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ತಾವು ಇಂದು ಬಿಹಾರಕ್ಕೆ ತೆರಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ಆಗಮಿಸಲಿದ್ದಾರೆ. ಕಾರ್ಯಕಾರಿ ಸಭೆ ಮುಗಿಸಿಕೊಂಡು ನಾಳೆ ನಾವು ವಾಪಸ್ ಬರುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.