Friday, October 3, 2025
Homeರಾಜ್ಯಮೈಸೂರು ಮಾದರಿಯಲ್ಲೇ ತುಮಕೂರು ದಸರಾದಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು : ಗೃಹ ಸಚಿವ ಪರಮೇಶ್ವರ್

ಮೈಸೂರು ಮಾದರಿಯಲ್ಲೇ ತುಮಕೂರು ದಸರಾದಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು : ಗೃಹ ಸಚಿವ ಪರಮೇಶ್ವರ್

Students to perform Fire parade at Tumkur Dasara similar to Mysore

ತುಮಕೂರು,ಸೆ.26– ಮೈಸೂರು ಮಾದರಿಯಲ್ಲೇ 240 ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಸೆ.28 ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಪಂಜಿನ ಕವಾಯತಿನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್‌ ಹಾಗೂ ಗಾಗಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪಂಜಿನ ಕವಾಯತು ಪ್ರದರ್ಶನವನ್ನು ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ತುಮಕೂರು ದಸರಾ ಉತ್ಸವವು ಈಗಾಗಲೇ ರಾಜ್ಯದ ಗಮನ ಸೆಳೆದಿದ್ದು, ವಿದ್ಯಾರ್ಥಿಗಳ ಪಂಜಿನ ಕವಾಯತು ಪ್ರದರ್ಶನವು ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಲಿದೆ. ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯು ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದು, ಈ ಪ್ರದರ್ಶನ ವಿದ್ಯಾರ್ಥಿಗಳ ಜೀವನದಲ್ಲೂ ನೆನಪಿನ ಕ್ಷಣವಾಗಲಿದೆ ಎಂದು ತಿಳಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಪೊಲೀಸ್‌‍ ಪಡೆಯು ಶಿಸ್ತಿನಿಂದ ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತದೆ. ಅದೇ ರೀತಿ ನಮ ಜಿಲ್ಲೆಯಲ್ಲೂ ಪಂಜಿನ ಕವಾಯತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಪಾಲ್ಗೊಳ್ಳಲು ಒಂದೇ ರೀತಿಯ ಟ್ರ್ಯಾಕ್‌ಸೂಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರಲ್ಲದೆ, ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಟ್ರೈನರ್‌ಗಳಿಂದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪಂಜಿನ ಕವಾಯತು ವೀಕ್ಷಿಸಲು ಹೆಸರು ನೋಂದಣಿಗಾಗಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು https://smarttumakuru.karnatakasmartcity.in/OneCityOneApp/#/Dasara/bookingdashboard ಈ ಆ್ಯಪ್‌ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವದ ಪ್ರಯುಕ್ತ ರಾಷ್ಟ್ರ ಮಟ್ಟದ ರೈಫಲ್‌ ಶೂಟಿಂಗ್‌ ಸ್ಪರ್ಧೆಗಳು ಇದೇ ತಿಂಗಳು 27 ಮತ್ತು 28ರಂದು ಮಹಾತ ಗಾಂಧಿ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಮಾರು 500 ಕ್ರೀಡಾಪಟುಗಳು ಹಾಗೂ ಭಾರತದ ಯೋಧರ ಶೂಟಿಂಗ್‌ ತಂಡವೂ ಸಹ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಇದರ ಜೊತೆಗೆ ಟೆನ್ನಿಸ್‌‍, ಜಿಮ್ನಾಸ್ಟಿಕ್‌, ಕಬ್ಬಡ್ಡಿ, ವಾಲಿಬಾಲ್‌, ಚೆಸ್‌‍, ಮ್ಯಾರಥಾನ್‌ ಹಾಗೂ ಖೋ-ಖೋ ಸೇರಿ ಒಟ್ಟು 9 ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಚಿವರು :
ಇದಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಧಾರ್ಮಿಕ ಮಂಟಪದಲ್ಲಿ ರಾಜರಾಜೇಶ್ವರಿ ಅಲಂಕಾರದಲ್ಲಿದ್ದ ಶ್ರೀ ಚಾಮುಂಡೇಶ್ವರಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ದಂಪತಿ ಪೂಜೆ ಸಲ್ಲಿಸಿದರು. ನವರಾತ್ರಿ ಪ್ರಯುಕ್ತ ಜರುಗಿದ ಶ್ರೀ ಕನಕದುರ್ಗಾ ಹೋಮದಲ್ಲಿ ಪಾಲ್ಗೊಂಡ ಸಚಿವರು, ಪೂರ್ಣಾಹುತಿ ಸೇರಿದಂತೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕೆ.ವಿ. ಅಶೋಕ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪ ವಿಭಾಗಾಧಿಕಾರಿ ನಾಹಿದಾ ಜ಼ಮ್‌ ಜ಼ಮ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌‍ ಉಪಾಧೀಕ್ಷಕ ಪರಮೇಶ್ವರ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Latest News