Friday, October 3, 2025
Homeರಾಜ್ಯಕಾವೇರಿ ಆರತಿಗೆ ಕ್ಷಣಗಣನೆ, ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್‌‍ ಜಲಾಶಯ

ಕಾವೇರಿ ಆರತಿಗೆ ಕ್ಷಣಗಣನೆ, ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್‌‍ ಜಲಾಶಯ

Countdown to Cauvery Aarti

ಶ್ರೀರಂಗಪಟ್ಟಣ,ಸೆ.26– ಕಾವೇರಿ ಆರತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೆಆರ್‌ಎಸ್‌‍ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಅದ್ಧೂರಿಯಾಗಿ ಕಾವೇರಿ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ಕೃಷ್ಣ ರಾಜಸಾಗರದ ಬೋಟಿಂಗ್‌ ಪಾಯಿಂಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 6 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಒಟ್ಟು 5 ದಿನಗಳ ಕಾಲ ನಡೆಯುವ ಕಾರ್ಯಕ್ರಮ ಒಂದು ರೀತಿ ಹಬ್ಬದಂತಿರಲಿದೆ. ಈಗಾಗಲೇ ಜಲಾಶಯಕ್ಕೆ ವರ್ಣರಂಜಿತ ವಿದ್ಯುತ್‌ ದ್ವೀಪಗಳಿಂದ ಅಲಂಕಾರ ಮಾಡಲಾಗಿದ್ದು, ಜಗಮಗಿಸುತ್ತಿದೆ. ಕಾವೇರಿ ಆರತಿಗೆ ಕರ್ನಾಟಕ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ತರಬೇತಿ ಪಡೆದ 12 ರಿಂದ 13 ಸ್ಥಳೀಯ ಪುರೋಹಿತರು ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆಚರಿಸಲಿದ್ದಾರೆ.

ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಜೊತೆಗೆ 5 ದಿನಗಳ ಕಾಲ ಟೋಲ್‌ ಸಂಗ್ರಹದಲ್ಲೂ ಪ್ರವಾಸಿಗರಿಗೆ ವಿನಾಯಿತಿ ಇರಲಿದೆ.ಕಾವೇರಿ ಆರತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಉಚಿತ ಲಾಡು ವಿತರಿಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲಿರುವ ಗಣ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಆಸನ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮೈಸೂರು ದಸರಾಗೆ ಭೇಟಿ ನೀಡಿರುವ ಪ್ರವಾಸಿಗರು ಕಾವೇರಿ ಆರತಿಯಲ್ಲೂ ಪಾಲ್ಗೊಂಡು ಜಲಾಶಯದ ಸೌಂದರ್ಯವನ್ನು ಸವಿಯುವ ಸೌಭಾಗ್ಯವನ್ನು ಕಲ್ಪಿಸಲಾಗಿದೆ.

RELATED ARTICLES

Latest News