ನವದೆಹಲಿ, ಸೆ.26- ಲಡಾಖ್‌ನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸೋನಮ್ ವಾಂಗ್‌ಚುಕ್ ಅವರ ಸರ್ಕಾರೇತರ ಸಂಸ್ಥೆ ಲಡಾಖ್ ವಿದ್ಯಾರ್ಥಿಗಳ ಲಡಾಖ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿಯ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ನಾಲ್ವರು ಸಾವನ್ನಪ್ಪಿ ಇತರ ಅನೇಕರು ಗಾಯಗೊಂಡ ನಂತರ ಕೇಂದ್ರ ಸರ್ಕಾರವು ವಿದೇಶಿ ನಿಧಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ ಪರವಾನಗಿ ರದ್ದು ಮಾಡಿದೆ. ವಾಂಗ್‌ಚುಕ್ ಅವರ ವೈಯಕ್ತಿಕ ಮತ್ತು ಜಂಟಿ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಲಾಗಿದ್ದು ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ -2010 ಉಲ್ಲಂಘನೆಯಾಗಿದೆ. 2021 ಮತ್ತು 2024 ರ ನಡುವೆ ಅವರ ಎನ್‌ಜಿಒ ವಿದೇಶದಿಂದ ಕೋಟ್ಯಂತರ ರೂಪಾಯಿಗಳನ್ನು ಸ್ವೀಕರಿಸಿದೆ. ವಿದೇಶದಿಂದ ಬಂದ ಹಣವನ್ನು ಅಪರಿಚಿತ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ.
59 ವರ್ಷ ವಯಸ್ಸಿನ ಸೋನಮ್ ವಾಂಗ್‌ಚುಕ್ 9 ಖಾತೆಗಳನ್ನು ಹೊಂದಿದ್ದು ಅವುಗಳಲ್ಲಿ 8 ಖಾತೆಗಳನ್ನು ಘೋಷಣೆ ಮಾಡಿಲ್ಲ. ಈ ಎಂಟರ ಪೈಕಿ ಹಲವು ಖಾತೆಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ರವಾನೆಯಾಗಿದೆ. ವಾಂಗ್‌ಚುಕ್ 2021 ಮತ್ತು 2024 ರ ನಡುವೆ ತಮ್ಮ ವೈಯಕ್ತಿಕ ಖಾತೆಯಿಂದ ವಿದೇಶಗಳಿಗೆ ಸುಮಾರು 2.3 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದೆ.
ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವ ವಾಂಗ್‌ಚುಕ್ ವಿರುದ್ಧ ಸಿಬಿಐ ಸಹ ಪ್ರಾಥಮಿಕ ತನಿಖೆ ಆರಂಭಿಸಿದೆ.ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ವರು ಮೃತಪಟ್ಟಿದ್ದರು. 40 ಪೊಲೀಸ್ ಸಿಬ್ಬಂದಿ ಸೇರಿದಂತೆ 80 ಜನರು ಗಾಯಗೊಂಡರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ವಾಂಗ್‌ಚುಕ್ ನೀಡಿದ ಹೇಳಿಕೆಯೇ ಕಾರಣ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.