Friday, October 3, 2025
Homeರಾಜ್ಯಪಂಚಭೂತಗಳಲ್ಲಿ ಎಸ್‌‍.ಎಲ್‌.ಭೈರಪ್ಪ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆ

ಪಂಚಭೂತಗಳಲ್ಲಿ ಎಸ್‌‍.ಎಲ್‌.ಭೈರಪ್ಪ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆ

S.L. Bhairappa's last rites performed with full state honours

ಬೆಂಗಳೂರು, ಸೆ.26– ಆರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಕನ್ನಡ ಭಾಷೆಗೆ ಹಿರಿಮೆ ತಂದುಕೊಟ್ಟಿದ್ದ ಪ್ರಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮಾನ್‌ ಪ್ರಶಸ್ತಿ ಪುರಸ್ಕೃತ ಡಾ.ಎಸ್‌‍.ಎಲ್‌.ಭೈರಪ್ಪ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿಂದು ಲೀನವಾಯಿತು.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬ್ರಾಹಣ ಸಂಪ್ರದಾಯದಂತೆ ಎಸ್‌‍.ಎಲ್‌. ಭೈರಪ್ಪನವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಮೃತರ ಗೌರವಾರ್ಥವಾಗಿ ಪೊಲೀಸರು ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು. ಭೈರಪ್ಪನವರ ಪುತ್ರರಾದ ಎಸ್‌‍.ಬಿ.ರವಿಶಂಕರ್‌ ಮತ್ತು ಎಸ್‌‍.ಬಿ.ಉದಯ್‌ ಶಂಕರ್‌ ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಭೈರಪ್ಪನವರ ಕುಟುಂಬದವರು,ಬಂಧುಗಳು, ಸ್ನೇಹಿತರು ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರು ರಾಷ್ಟ್ರಧ್ವಜವನ್ನು ಭೈರಪ್ಪ ಅವರ ಪುತ್ರರಿಗೆ ಹಸ್ತಾಂತರಿಸಿದರು. ಭೈರಪ್ಪನವರು ತಮ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಸಾಹಿತಿ ಹಾಗೂ ಸಾಕು ಪುತ್ರಿ ಎಂದೇ ಗುರುತಿಸಿಕೊಂಡಿದ್ದ ಸಹನಾ ವಿಜಯ್‌ ಕುಮಾರ್‌ ನೆರವೇರಿಸುವಂತೆ ವಿಲ್‌ನಲ್ಲಿ ಬರೆದಿದ್ದರು ಎನ್ನಲಾಗಿದೆ.

ಹಲವಾರು ದಶಕಗಳ ಕಾಲ ಸಾರಸ್ವತ ಲೋಕದಲ್ಲಿ ಮಿನುಗುತಾರೆಯಂತೆ ಸದಾ ಕಂಗೊಳಿಸಿ, ಓದುಗರಿಗೆ ಯಾವಾಗಲೂ ಸದಭಿರುಚಿಯ ಕೃತಿಗಳನ್ನು ನೀಡುತ್ತಿದ್ದ ಅಕ್ಷರ ಮಾಂತ್ರಿಕ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು.ಅಂತ್ಯ ಸಂಸ್ಕಾರದ ವೇಳೆ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು,ಬರಹಗಾರರು, ಓದುಗರು, ಚಿಂತಕರು, ಜಿಲ್ಲಾಡಳಿತ ಮತ್ತಿತರರು ಭಾರವಾದ ಹೃದಯದಿಂದಲೇ ಅಂತಿಮ ವಿದಾಯ ಹೇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಭೈರಪ್ಪನವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸರ್ಕಾರದ ಪರವಾಗಿ ಸಚಿವ ಪ್ರಹ್ಲಾದ್‌ಜೋಶಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಚಿವರಾದ ಡಾ.ಹೆಚ್‌.ಸಿ.ಮಹದೇವಪ್ಪ, ವೆಂಕಟೇಶ್‌, ಮಾಜಿ ಸಂಸದ ಪ್ರತಾಪಸಿಂಹ, ಶಾಸಕರಾದ ಶ್ರೀವತ್ಸ, ಜಿ.ಟಿ.ದೇವೇಗೌಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌‍ ಎಸ್‌‍ಪಿ ಸೇರಿದಂತೆ ಜಿಲ್ಲಾಡಳಿತದ ಉನ್ನತಾಧಿಕಾರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News