ಬೆಂಗಳೂರು,ಸೆ.26– ಫರ್ನಿಚರ್ ಅಂಗಡಿವೊಂದರಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮಲ್ಲೇಶ್ವರಂ ಪೈಪ್ಲೈನ್ ರಸ್ತೆಯಲ್ಲಿ ಫರ್ನಿಚರ್ ಅಂಗಡಿ ಇದ್ದು, ಅಲ್ಲಿಯೇ ಪೀಠೋಪಕರಣಗಳನ್ನು ತಯಾರು ಮಾಡುತ್ತಾರೆ.
ಅಂಗಡಿಯ ನಾಲ್ಕೈದು ಮಂದಿ ಕಾರ್ಮಿಕರು ಮೊದಲ ಮಹಡಿಯಲ್ಲಿ ರಾತ್ರಿ ಮಲಗಿದ್ದಾರೆ. ಇಂದು ಮುಂಜಾನೆ 2.30 ರ ಸುಮಾರಿನಲ್ಲಿ ಅಂಗಡಿಯ ನೆಲ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಪೀಠೋಪಕರಣಗಳಿಗೆ ತಗುಲಿ ಹೊತ್ತಿ ಉರಿಯುತ್ತಿತ್ತು.ಈ ಬೆಂಕಿ ಮೊದಲ ಮಹಡಿಗೂ ಆವರಿಸಿದೆ. ಇದನ್ನು ಗಮನಿಸಿದ ಅಕ್ಕ ಪಕ್ಕದ ನಿವಾಸಿಗಳು ತಕ್ಷಣ ಕಾರ್ಮಿಕರನ್ನು ಎಬ್ಬಿಸಿದ್ದಾರೆ. ಕಾರ್ಮಿಕರು ಕಟ್ಟಡದಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದು ತಕ್ಷಣ 13 ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಮುಂಜಾನೆ 5.30 ರ ಸುಮಾರಿಗೆ ಬೆಂಕಿ ತಹಬದಿಗೆ ಬಂದಿದೆ.
ಪೀಠೋಪಕರಣ ಅಂಗಡಿಯಾದ್ದರಿಂದ ಬೆಂಕಿ ಕೆಲವು ಪೀಠೋಪಕರಣಗಳಿಗೆ ತಾಗಿರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸತತ ಕಾರ್ಯಚರಣೆ ಮುಂದುವರೆಸಿದ್ದಾರೆ.
ಬೆಂಕಿಯಿಂದಾಗಿ ಅಕ್ಕ-ಪಕ್ಕದ ಮೂರು ಮನೆಗಳಿಗೆ ಹಾನಿಯಾಗಿದೆ.ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಬೆಂಕಿ ಅವಘಡದಿಂದಾಗಿ ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.