ನವದೆಹಲಿ,ಸೆ.27- ಮಹತ್ವದ ಬೆಳೆವಣಿಗೆಯಲ್ಲಿ ಪಂಜಾಬ್‌ನ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಭಾಗಿಯಾಗಿದ್ದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (ಬಿಕೆಐ) ಭಯೋತ್ಪಾದಕನನ್ನು ಸಿಬಿಐ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಸಿಬಿಐ ಹಾಗೂ ಪಂಜಾಬ್ ಪೊಲೀಸರ ಸಮನ್ವಯದೊಂದಿಗೆ ಉಗ್ರನನ್ನು ಯುಎಇಯಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು.
ನಿರ್ಮಲ್ ಸಿಂಗ್ ಅಲಿಯಾಸ್ ಪಿಂಡಿ ಕರೆಯಲ್ಪಡುತ್ತಿದ್ದ ಪರ್ಮಿಂದರ್ ಸಿಂಗ್ ಭಾರತದ ಅನೇಕ ಕಡೆ ಭಯೋತ್ಪಾದನೆಯ ಕೃತ್ಯ ನಡೆಸಿ ಯುಇಎನಲ್ಲಿ ತಲೆಮರೆಸಿಕೊಂಡಿದ್ದ. ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಹಣವನ್ನು ಸಂಗ್ರಹಿಸುವುದು, ಕೊಲೆ ಯತ್ನ, ಸುಲಿಗೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.
ಭಾರತದಿಂದ ಈತ ಪಲಾಯನ ಮಾಡಿದ ನಂತರ ವಿದೇಶದಲ್ಲಿ ಅಡಗಿಕೊಂಡಿದ್ದ.ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಘಟಕ (ಐಪಿಸಿಯು), ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ, ಅಬುಧಾಬಿಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ಸಿಬಿ) ಮತ್ತು ಪಂಜಾಬ್ ಪೊಲೀಸರ ಸಮನ್ವಯದೊಂದಿಗೆ ಈ ಸಂಪೂರ್ಣ ಕಾರ್ಯಾಚರಣೆಯನ್ನು ನಡೆಸಿತು. ಸೆಪ್ಟೆಂಬರ್ 26ರಂದು ಪಂಜಾಬ್ ಪೊಲೀಸ್ ತಂಡವು ಆತನನ್ನು ಭಾರತಕ್ಕೆ ಕರೆತಂದಿದೆ.
ಇದಕ್ಕೂ ಮೊದಲು, ಜೂನ್ 13 ರಂದು, ಪಂಜಾಬ್ ಪೊಲೀಸರ ಕೋರಿಕೆಯ ಮೇರೆಗೆ, ಸಿಬಿಐ ಇಂಟರ್ಪೋಲ್ ಮೂಲಕ ರೆಡ್ ನೋಟಿಸ್ ಹೊರಡಿಸಿತ್ತು. ತರುವಾಯ, ಯುಎಇ ಏಜೆನ್ಸಿಗಳು ಆರೋಪಿಯನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲು ನಿರ್ಧರಿಸಿದವು.ಪಂಜಾಬ್ ಪೊಲೀಸರ ಕೋರಿಕೆಯ ಮೇರೆಗೆ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದ ನಾಲ್ವರು ಸದಸ್ಯರ ತಂಡವು ಸೆ.24ರಂದು ಯುಎಇಗೆ ಪ್ರಯಾಣ ಬೆಳೆಸಿ ಅಲ್ಲಿ ಆರೋಪಿಗಳನ್ನು ಸ್ವದೇಶಕ್ಕೆ ಮರಳಿ ಕರೆತಂದಿತು.
ಕಳೆದ ಕೆಲವು ವರ್ಷಗಳಲ್ಲಿ, ಸಿಬಿಐ 130ಕ್ಕೂ ಹೆಚ್ಚು ವಿದೇಶಗಳಿಂದ ಪರಾರಿಯಾಗಿದ್ದ ಕೈದಿಗಳನ್ನು ಯಶಸ್ವಿಯಾಗಿ ಹಸ್ತಾಂತರಿಸಿ ಗಡೀಪಾರು ಮಾಡಿದೆ.ಪರ್ಮಿಂದರ್ ಸಿಂಗ್ ಅವರನ್ನು ಹಸ್ತಾಂತರಿಸುವುದು ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಹೋರಾಟದಲ್ಲಿ ದೊರೆತ ಪ್ರಮುಖ ಗೆಲುವು ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಪರ್ಮಿಂದರ್ ಸಿಂಗ್ ನಿಯೋಜಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಅವರ ಆಪ್ತ ಸಹಚರನಾಗಿದ್ದಾನೆ. ಫೆಬ್ರವರಿ 2023ರಲ್ಲಿ ಗೃಹ ಸಚಿವಾಲಯವು ರಿಂಡಾನನ್ನು ಪಟ್ಟಿ ಮಾಡಿದ ಭಯೋತ್ಪಾದಕ ಎಂದು ಘೋಷಿಸಿತು. ಲಾಹೋರ್‌ನಲ್ಲಿ ನೆಲೆಸಿರುವ ರಿಂಡಾ ಬಿಕೆಐ ಮುಖ್ಯಸ್ಥನಾಗಿದ್ದು, ಐಎಸ್‌ಐ ನಿರ್ದೇಶನದ ಮೇರೆಗೆ ರಿಂಡಾ ಮತ್ತು ಹ್ಯಾಪಿ ಪಾಸಿಯಾ ಅವರು ಪಂಜಾಬ್‌ನಲ್ಲಿ 13 ಗ್ರೆನೇಡ್ ದಾಳಿಗಳನ್ನು ನಡೆಸಿರುವುದನ್ನು ತನಿಖೆಯಲ್ಲಿ ಬಹಿರಂಗಗೊಂಡಿದೆ.
ರೆಡ್ ನೋಟಿಸ್ ಎಂದರೇನು?
ರೆಡ್ ನೋಟಿಸ್ ಎಂದರೆ ಪರಾರಿಯಾದವರನ್ನು ಸೆರೆಹಿಡಿಯಲು ಸಹಾಯ ಮಾಡಲು ವಿಶ್ವದಾದ್ಯಂತ ಪೊಲೀಸ್ ಸಂಸ್ಥೆಗಳಿಗೆ ಇಂಟರ್ಪೋಲ್ ನೀಡುವ ಎಚ್ಚರಿಕೆ.ಭಾರತದಲ್ಲಿ ಇಂಟರ್ಪೋಲ್‌ಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಸಿಬಿಐ ರಾಷ್ಟ್ರೀಯ ಕೇಂದ್ರೀಯ ಬ್ಯೂರೋ (ಎನ್ಸಿಬಿ) ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಇಂಟರ್ಪೋಲ್ ನೆಟ್ವರ್ಕ್ ಮೂಲಕ ವಿವಿಧ ಭಾರತೀಯ ಏಜೆನ್ಸಿಗಳನ್ನು ಸಂಪರ್ಕಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇಂಟರ್ಪೋಲ್‌ಗಳ ಸಹಾಯದಿಂದ, 130ಕ್ಕೂ ಹೆಚ್ಚು ಪರಾರಿಯಾದವರನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ.
ಇಂಟರ್ಪೋಲ್ ಏಷ್ಯನ್ ಸಮಿತಿಗೆ ಭಾರತ ಆಯ್ಕೆ
ಇಂಟರ್ಪೋಲ್ ಏಷ್ಯನ್ ಸಮಿತಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತವು ಅಂತರರಾಷ್ಟ್ರೀಯ ಕಾನೂನು ಜಾರಿಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಿಂಗಾಪುರದಲ್ಲಿ ನಡೆದ 25 ನೇ ಏಷ್ಯನ್ ಪ್ರಾದೇಶಿಕ ಸಮೇಳನದ ಸಂದರ್ಭದಲ್ಲಿ ಈ ಚುನಾವಣೆ ನಡೆದಿದ್ದು, ಕಠಿಣ ಬಹು-ಹಂತದ ಮತದಾನ ಪ್ರಕ್ರಿಯೆಯ ನಂತರ ಭಾರತ ಯಶಸ್ವಿಯಾಗಿ ಹೊರಹೊಮಿತು.
ಜಾಗತಿಕ ಪೊಲೀಸ್ ಮತ್ತು ಭದ್ರತಾ ಸಹಯೋಗದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವಲ್ಲಿ ಈ ಬೆಳವಣಿಗೆ ಒಂದು ನಿರ್ಣಾಯಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಏಷ್ಯನ್ ಸಮಿತಿಯು ಪ್ರಮುಖ ಸಲಹಾ ಕಾರ್ಯವನ್ನು ನಿರ್ವಹಿಸುತ್ತದೆ, ಅಪರಾಧವನ್ನು ಎದುರಿಸಲು ಕಾರ್ಯತಂತ್ರದ ಆದ್ಯತೆಗಳನ್ನು ನಿಗದಿಪಡಿಸುವ ಮೂಲಕ ಮತ್ತು ಪ್ರದೇಶದಾದ್ಯಂತ ವರ್ಧಿತ ಪೊಲೀಸ್ ಸಹಕಾರವನ್ನು ಬೆಳೆಸುವ ಮೂಲಕ ಏಷ್ಯನ್ ಪ್ರಾದೇಶಿಕ ಸಮೇಳನಕ್ಕೆ ಸಹಾಯ ಮಾಡುತ್ತದೆ.