ಬೆಂಗಳೂರು,ಸೆ.27- ರಾಜ್ಯದ ನಾನಾ ಕಡೆ ನಿರಂತರ ವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕಡೆ ಹಾನಿ ಸಂಭವಿಸಿದ್ದು, ಬಾಗಲಕೋಟೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಬಾಗಲಕೋಟೆ, ಬೀದರ್, ಕಲಬುರಗಿ, ಬೆಳಗಾವಿ, ವಿಜಯಪುರ, ಸೇರಿದಂತೆ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ.
ಈ ನಡುವೆ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಜನರಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಸರ್ಕಾರ ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಸೇರಿದಂತೆ ಇಡೀ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಿರಂತರ ಮಳೆಗೆ ಮನೆಯ ತಗಡಿನ ಮೇಲ್ಛಾವಣಿ ಹಾಗೂ ಗೋಡೆ ಕುಸಿದು ನಾಗಪ್ಪ ಲಾತೂರ್ ಮಗ ದರ್ಶನ್ ಲಾತೂರ್ (11) ಮೃತಪ್ಟಿದ್ದಾನೆ.
ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಅವಘಡ ಸಭಂಭವಿಸಿದೆ. ಘಟನೆಯಲ್ಲಿ ಇನ್ನೊಬ್ಬ ಬಾಲಕ ಶ್ರೀಶೈಲ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ಭಾರೀ ಮಳೆಯಿಂದ ಎಲ್ಲೆಡೆ ಪ್ರವಾಹ ಉಂಟಾಗಿದೆ. ಹಲವು ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಗ್ರಾಮಗಳ ಸಂಪರ್ಕ ಕಡಿದುಕೊಂಡಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಜೇವರ್ಗಿ ಪಟ್ಟಣದ ಕಟ್ಟಿಸಂಗಾರಿ ಸೇತುವೆ ಮುಳುಗಡೆಯಾಗಿದೆ. ಎರಡು ದಿನ ನಿರಂತರ ಮಳೆಯಾಗುತ್ತಿರುವುದರಿಂದ ಕರ್ಚಾಖೇಡ ಗ್ರಾಮಕ್ಕೆ ನೀರು ನುಗ್ಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ದೇವಸ್ಥಾನಕ್ಕೆ ಹಳ್ಳದ ನೀರು ಹರಿದ ಪರಿಣಾಮ ಜನರು ಪರದಾಡುವಂತಾಗಿದೆ. ತಾಲ್ಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ಹಾಗೂ ಮಹಾಲಕ್ಷ್ಮಿ ದೇವಸ್ಥಾನಕ್ಕೂ ಪ್ರವಾಹದ ಭೀತಿ ಎದುರಾಗಿದೆ.
ಸನ್ನತಿ ಬ್ಯಾರೇಜ್ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಭೀಮಾನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ನಲುಗಿ ಹೋಗಿದೆ. ನಾಯ್ಕಲ್ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಹಾನಿಗೊಂಡಿವೆ. ಈ ಪ್ರದೇಶದ ಒಂದು ಕಿ.ಮೀ ಸುತ್ತ ನೀರು ನುಗ್ಗಿರುವುದರಿಂದ ಬೆಳೆದಿದ್ದ ಭತ್ತ, ಹತ್ತಿ ಬೆಳೆಗಳು ಮುಳುಗಡೆಯಾಗಿವೆ.
ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಹಿನ್ನೆಲೆ ದಸರಾ ರಜೆ ನಡುವೆಯೂ ಕೆಲವು ಆಡಳಿತ ಮಂಡಳಿಯವರು ಶಾಲೆ ನಡೆಸುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಸದರಿ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿ ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ ಆದೇಶ ಹೊರಡಿಸಿದ್ದಾರೆ.
ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕಗೂ ಅಧಿಕ ಒಳ ಹರಿವಿದ್ದು ಮೂರು ಗೇಟುಗಳನ್ನು ತಲಾ 10 ಅಡಿ ತೆರೆದು ನೀರು ಬಿಡಲಾಗಿದೆ. ಇದರಿಂದ ಚಂದ್ರಂಪಳ್ಳಿ ಕೂಡು ಸೇತುವೆ ಸಂಪೂರ್ಣ ಮುಳುಗಿದೆ. ಗ್ರಾಮ ಸಂಪರ್ಕ ಕಡಿದುಕೊಂಡಿದ್ದು ಗ್ರಾಮಸ್ಥರು ಜಾಗೃತರಾಗಿರಲು ಯೋಜನಾಧಿಕಾರಿ ಚೇತನ ಕಳಸ್ಕರ ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಜೋರು ಮಳೆ ಸುರಿಯುತ್ತಿದ್ದು ಕುಂಭ ದ್ರೋಣ ಮಳೆಗೆ ಜನರು ತಲ್ಲಣಗೊಂಡಿದ್ದಾರೆ. ಚಂದಾಪುರ, ಗಾರಂಪಳ್ಳಿ, ಅಣವಾರ, ಕಲ್ಲೂರು, ಕನಕಪುರ ಸೇರಿದಂತೆ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ.
ಬೀದರ್ನಲ್ಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ನದಿಗಳು, ಹಳ್ಳಕೊಳ್ಳಗಳು, ತೊರೆಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ನದಿಗಳಿಗೆ ವ್ಯಾಪಕ ಪ್ರಮಾಣದ ನೀರು ಹರಿದುಬಂದಿದೆ.
ಕೆಲವು ಕಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜಿಲ್ಲಾಡಳಿತ ನದಿ ಪಕ್ಕದ ಜನರನ್ನು ಬಲವಂತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಬಿಟ್ಟೂ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹುಲಸುರು, ಬೀದರ್ ತಾಲೂಕು, ಭಾಲ್ಕಿಯಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹುಲಸೂರು ತಾಲೂಕಿನ ಇಂಚುರು ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ.
ಹುಲಸೂರು ಇಂದ ಭಾಲ್ಕಿ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದು ಬೀದರ್ ತಾಲೂಕಿನ ಚಿಲ್ಲರ್ಗಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಬಂದಾಗಿದೆ. ಸೇತುವೆ ಮೇಲೆ ನೀರು ಹರಿದು ಪರಿಣಾಮ ರಸ್ತೆ ಸಂಚಾರ ಬಂದಾಗಿದ್ದು, ಚಿಲ್ಲರ್ಗಿ ಟು ಚಿಮಕೋಡ್, ಗಾದಗಿ ರಸ್ತೆ ಸಂಚಾರ ಬಂದಾಗಿದೆ. ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುತ್ತಿದ್ದರೆ, ಕೆಲವರು ನೀರು ತುಂಬಿದ ರಸ್ತೆ ಮೇಲೆಯ ನಡೆದುಕೊಂಡು ಸೇತುವೆ ದಾಟುತ್ತಿದ್ದಾರೆ.
ಇನ್ನೂ ಕಮಲನಗರದ ಗ್ರಾಮವೊಂದರಲ್ಲಿ ರಸ್ತೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ದಾಟಲು ಎಮೆಗಳು ಪರದಾಡಿವೆ. ಮಾಂಜ್ರಾನದಿಗೆ ಲಕ್ಷ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಮಾಂಜ್ರಾನದಿ ದಡದಲ್ಲಿರುವ ಲಕ್ಷಾಂತರ ಎಕರೆ ಜಮೀನುಗಳಲ್ಲಿ ಬೆಳೆದಿದ್ದ ಬೆಳಗಳು ಸಂಪೂರ್ಣವಾಗಿ ಜಲಾವೃತವಾಗಿವೆ.
ಧಾರಾಕಾರ ಮಳೆ ಹಾಗೂ ಮಾಂಜ್ರಾನದಿ ಎಫೆಕ್ಟ್ ಜಿಲ್ಲೆಯ ಜನ್ರ ಜೀವನ ಮೂರಾಬಟ್ಟೆಯಾಗಿದ್ದು ಇಂದು ಕೂಡಾ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಣೆಮಾಡಲಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಆಲಮೇಲ ತಾಲೂಕಿನ ತಾವರಖೇಡ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಮನೆಗಳು ಜಲಾವೃತಗೊಂಡಿದೆ. ಪ್ರವಾಹ ಸ್ಥಿತಿಯ ನಡುವೆಯೂ ತೋಟದಲ್ಲಿ ಕುಟುಂಬಗಳು ವಾಸವಿದ್ದರು. ತೋಟದ ಮನೆಗಳಲ್ಲಿದ್ದ 8 ಜನರನ್ನು ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.