ಚೆನ್ನೆ,ಸೆ.28- 39 ಮಂದಿಯ ಸಾವಿಗೆ ಕಾರಣವಾದ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ರಾಜಕೀಯ ಟೀಕೆಗಳನ್ನು ಮಾಡುವುದಿಲ್ಲ.. ಆದರೆ ನ್ಯಾಯಾಂಗ ಆಯೋಗದ ವರದಿ ಆಧರಿಸಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೂರ್ ಕಾಲ್ತುಳಿತದ ಬಗ್ಗೆ ಯಾವುದೇ ರಾಜಕೀಯ ಹೇಳಿಕೆ ನೀಡುವುದಿಲ್ಲ. ಮಾಜಿ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ಅವರ ತನಿಖಾ ಆಯೋಗದ ಸಂಶೋಧನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರೂರಿಗೆ ಧಾವಿಸಿದ ಸ್ಟಾಲಿನ್ ಅವರು, ಮೃತರ ಕುಟುಂಬಗಳೊಂದಿಗೆ ಸಂವಾದ ನಡೆಸಿ ಶವಗಳಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ಆಗಮಿಸಿದ ಸಿಎಂ ಸ್ಟಾಲಿನ್, ರೋಗಿಗಳ ಚಿಕಿತ್ಸೆಯನ್ನು ಪರಿಶೀಲಿಸಿದರು. ಈ ವೇಳೆ 51 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ, ಅದರಲ್ಲಿ 26 ಪುರುಷರು ಮತ್ತು 25 ಮಹಿಳೆಯರು ಎಂದು ವೈದ್ಯರು ಅವರಿಗೆ ವಿವರಿಸಿದರು.
ನಾನು ರಾಜಕೀಯವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಯಾವುದೇ ಕ್ರಮವು ಆಯೋಗದ ವರದಿ ಆಧರಿಸಿರುತ್ತದೆ.ಅಂತೆಯೇ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಹೆಸರನ್ನು ನೇರವಾಗಿ ಹೆಸರಿಸದೆ ರಾಜಕೀಯ ಪಕ್ಷ ನಡೆಸಿದ ಕಾರ್ಯಕ್ರಮದಿಂದಾಗಿ ಜನರು ಪ್ರಾಣ ಕಳೆದುಕೊಂಡರು. ಇದು ಮತ್ತೆ ಎಲ್ಲಿಯೂ ಸಂಭವಿಸಬಾರದು ಎಂದರು. ಅಂತೆಯೇ ಮೃತರು ಮತ್ತು ಗಾಯಗೊಂಡವರಿಗೆ ಪರಿಹಾರ ನಿಧಿಯನ್ನು ಬಿಡುಗಡೆ ಮಾಡುವ ಘೋಷಣೆಯನ್ನು ಸಿಎಂ ಪುನರುಚ್ಚರಿಸಿದರು.
ಅಧಿಕೃತ ಅಂಕಿಅಂಶಗಳ ಪ್ರಕಾರ, ಕರೂರ್ ಕಾಲ್ತುಳಿತದ ಸಾವಿನ ಸಂಕ್ಯೆ 39ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರಲ್ಲಿ 13 ಪುರುಷರು, 17 ಮಹಿಳೆಯರು ಮತ್ತು ಆರು ಮಕ್ಕಳು ಸೇರಿದ್ದಾರೆ. ಅವರಲ್ಲಿ ನಾಲ್ವರು ಹುಡುಗರು ಮತ್ತು ಇಬ್ಬರು ಹುಡುಗಿಯರು ಸೇರಿದ್ದಾರೆ. ಈ ದುರಂತದ ಕುರಿತು ತನಿಖೆ ನಡೆಸಲು ತಮಿಳುನಾಡು ಸರ್ಕಾರ ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರ ನೇತೃತ್ವದಲ್ಲಿ ಸರ್ಕಾರ ಏಕವ್ಯಕ್ತಿ ತನಿಖಾ ಆಯೋಗ ನೇಮಿಸಿದೆ.