ಮೈಸೂರು,ಸೆ.29- ನಾಡಹಬ್ಬ ದಸರಾದ ಆಕರ್ಷಣೀಯವಾದ ಜಂಬೂ ಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿಂದು ತಾಲೀಮು ನಡೆಸಲಾಯಿತು. ವಿಜಯದಶಮಿ ದಿನ ನಾಡ ಅಧಿದೇವತಿ ಚಾಮುಂಡೇಶ್ವರಿ ತಾಯಿಯನ್ನು ಚಿನ್ನದ ಅಂಬಾರಿಯಲ್ಲಿ ಕುಳ್ಳರಿಸಿ ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಲಿದ್ದಾನೆ.
ಈ ಹಿನ್ನೆಲೆಯಲ್ಲಿ ಅಭಿಮನ್ಯು ಆನಂದ್, ಪೊಲೀಸ್ ಬ್ಯಾಂಡ್ ಅಶ್ವಾರೂಢ ದಳ ಹಾಗೂ ಪೊಲೀಸ್ ಪಡೆಯೊಂದಿಗೆ ಮೆರವಣಿಗೆ ನಡೆಸುವ ಮೂಲಕ ತಾಲೀಮು ನಡೆಸಲಾಯಿತು. ಜಂಬೂ ಸವಾರಿಗೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಗಜಪಡೆಗಳಿಗೆ ಅಂತಿಮ ಹಂತದ ತಾಲೀಮು ನಡೆಸಲಾಗುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ :
ಕಳೆದ ವರ್ಷ 8 ದಿನಗಳಲ್ಲಿ 4 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಾರಿ 7 ದಿನಗಳಲ್ಲಿ 4 ಲಕ್ಷ ಪ್ರವಾಸಿಗರು ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ದಸರಾ ವೈಭವವನ್ನು ವೀಕ್ಷಿಸಲು ರಾಜ್ಯ ಹಾಗೂ ಹೊರರಾಜ್ಯಗಳಿಂದ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮುಂದಿನ ನಾಲ್ಕು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಎಲ್ಲಾ ಹೋಟೆಲ್‌ಗಳು, ರೂಂಗಳು ಭರ್ತಿಯಾಗಿವೆ.
ಈ ಬಾರಿ ದಸರಾಗೆ ನಿರೀಕ್ಷೆಗೂ ಮೀರಿ ಪ್ರವಾಸಿಗರು ಆಗಮಿಸುತ್ತಿದ್ದು, ಹೋಟೆಲ್‌ಗಳಲ್ಲಿ ಭಾರೀ ವ್ಯಾಪಾರ ಜೋರಾಗಿದೆ. ಕಳೆದ 7 ದಿನಗಳಿಂದ ಇಲ್ಲಿಯವರೆಗೂ ಮೃಗಾಲಯಕ್ಕೆ 60 ಸಾವಿರ ಅರಮನೆಗೆ ಒಂದು ಲಕ್ಷ, ದಸರಾ ವಸ್ತುಪ್ರದರ್ಶನಕ್ಕೆ 2 ಲಕ್ಷ, ಚಾಮುಂಡಿ ಬೆಟ್ಟಕ್ಕೆ 1.30 ಲಕ್ಷ, ಆಹಾರ ಮೇಳಕ್ಕೆ 70 ಸಾವಿರ, ಫಲಪುಷ್ಪ ಪ್ರದರ್ಶನಕ್ಕೆ 20 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿರುವುದು ಗಮನಾರ್ಹ.
ಅಂತಾರಾಜ್ಯ ವಾಹನಗಳಿಗೆ ತೆರಿಗೆ ವಿನಾಯಿತಿ :
ಈ ಬಾರಿ ಅಂತಾರಾಜ್ಯ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಅದರಲ್ಲೂ ಮೈಸೂರು ನಗರವಷ್ಟೇ ಅಲ್ಲ, ಶ್ರೀರಂಗಪಟ್ಟಣ, ಕೆಆರ್‌ಎಸ್ ಜಲಾಶಯಕ್ಕೂ ಭೇಟಿ ನೀಡುವ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.ಹಗಲು ಕಳೆದು ರಾತ್ರಿಯಾಗುತ್ತಿದ್ದಂತೆ ವಿದ್ಯುತ್ ದೀಪಾಲಂಕಾರದಿಂದ ಜಘಮಗಿಸುತ್ತಿರುವ ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಹರಿದುಬರುತ್ತಿದೆ.