ನೆಲಮಂಗಲ,ಸೆ.29- ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಘಟನೆ ನೆಲಮಂಗಲ ಟೋಲ್ ಬಳಿ ನಡೆದಿದೆ.ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಂಟೈನರ್ ಲಾರಿ ಟೋಲ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಒಂದು ವೇಳೆ ಹಿಂದಿನಿಂದ ವೇಗವಾಗಿ ವಾಹನಗಳು ಬಂದಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಮುಂಜಾನೆಯಾದ್ದರಿಂದ ವಾಹನಗಳ ಸಂಖ್ಯೆ ಕಡಿಮೆಯಿದ್ದುದರಿಂದ ಅನಾಹುತ ಸಂಭವಿಸಿಲ್ಲ.
ಟ್ರಾಫಿಕ್ ಜಾಮ್ :
ಶನಿವಾರ ಹಾಗೂ ಭಾನುವಾರದ ಪ್ರಯುಕ್ತ ಹಾಗೂ ತುಮಕೂರು ದಸರಾ ನಿಮಿತ್ತ ಊರುಗಳಿಗೆ ತೆರಳಿದ್ದವರು ಇಂದು ಬೆಳಿಗ್ಗೆ ಬೆಂಗಳೂರಿನತ್ತ ವಾಪಸ್ಸಾಗುತ್ತಿದ್ದಾಗ ವಾಹನ ಅಪಘಾತದಿಂದ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸುದ್ದಿ ತಿಳಿದ ಕೂಡಲೇ ನೆಲಮಂಗಲ ಸಂಚಾರಿ ಠಾಣೆ ಹಾಗೂ ಟೋಲ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ವಾಹನವನ್ನು ಕ್ರೇನ್ ಮುಖಾಂತರ ಸ್ಥಳಾಂತರ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.