ಭೂಪಾಲ್,ಸೆ.29- ಎರಡು ವರ್ಷದ ಮಗನನ್ನು ರಸ್ತೆಬದಿಯಲ್ಲಿ ಬಿಟ್ಟು ದಂಪತಿ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ತೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶುಭಮ್ ಕರ್ದಾತೆ (25) ಮತ್ತು ಅವರ ಪತ್ನಿ ರೋಶ್ನಿ (24) ಆತಹತ್ಯೆ ಮಾಡಿಕೊಂಡಿರುವ ದಂಪತಿ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಬುಕಾಖೇಡಿ ಅಣೆಕಟ್ಟೆಯಿಂದ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಇವರಿಬ್ಬರು ಪ್ರೇಮ ವಿವಾಹವಾಗಿದ್ದು, ಕೌಟುಂಬಿಕ ಕಲಹಗಳಿಂದ ಜಿಗುಪ್ಸೆಗೊಂಡಿದ್ದರು. ಬೆಳಗ್ಗೆ ಕೂಡ ಜಗಳವಾಡಿ ರೋಶ್ನಿ ಮಗುವಿನೊಂದಿಗೆ ಮನೆಯಿಂದ ಹೊರಹೋಗಿದ್ದಾರೆ. ಶುಭಮ್ ಆಕೆಯನ್ನೇ ಹಿಂಬಾಲಿಸಿ ಇಬ್ಬರೂ ಬುಕಾಖೇಡಿ ಅಣೆಕಟ್ಟೆ ಬಳಿ ಬಂದಿದ್ದಾರೆ.
ನಂತರ ಶುಭಮ್ ತನ್ನ ಮಾವ, ಹತನಾಪುರದ ಮುನ್ನಾ ಪರಿಹಾರ್ಗೆ ಕರೆ ಮಾಡಿ ಮಗುವನ್ನು ಕರೆದುಕೊಂಡು ಹೋಗಲು ಅಣೆಕಟ್ಟಿಗೆ ಬರುವಂತೆ ಹೇಳಿದ್ದಾರೆ.ಮೋಟಾರ್ ಸೈಕಲ್ನಲ್ಲಿ ಬಂದ ಮಾವ ಕೂಡಲೇ ದಂಪತಿಗಳು ಒಟ್ಟಿಗೆ ಅಣೆಕಟ್ಟಿಗೆ ಹಾರಿದ್ದಾರೆ. ಕೂಡಲೇ ಮಗುವನ್ನು ತನ್ನ ಆರೈಕೆಯಲ್ಲಿ ತೆಗೆದುಕೊಂಡು ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ ತಂಡವು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಲ್ತೈ ಪೊಲೀಸ್ ಠಾಣೆಯ ಉಸ್ತುವಾರಿ ದೇವಕರನ್ ಡೆಹೆರಿಯಾ ತಿಳಿಸಿದ್ದಾರೆ.