Friday, October 3, 2025
Homeಬೆಂಗಳೂರುವಿದೇಶದಿಂದ ಅಂಚೆ ಮೂಲಕ ಪಾರ್ಸಲ್‌ ಬಂದಿದ್ದ 9.93 ಕೋಟಿ ಮೌಲ್ಯದ ಡ್ರಗ್ಸ್ ವಶ : 7...

ವಿದೇಶದಿಂದ ಅಂಚೆ ಮೂಲಕ ಪಾರ್ಸಲ್‌ ಬಂದಿದ್ದ 9.93 ಕೋಟಿ ಮೌಲ್ಯದ ಡ್ರಗ್ಸ್ ವಶ : 7 ಮಂದಿ ಬಂಧನ

Drugs worth Rs 9.93 crores received in a parcel from abroad through post: 7 arrested

ಬೆಂಗಳೂರು,ಸೆ.29- ಅಂಚೆ ಕಚೇರಿಗೆ ವಿದೇಶದಿಂದ ಪಾರ್ಸಲ್‌ ಮೂಲಕ ಬಂದಿದ್ದ 1 ಕೋಟಿ ರೂ.ಮೌಲ್ಯದ ಹೈಡ್ರೋ ಗಾಂಜಾ ಸೇರಿದಂತೆ ಒಟ್ಟು 9.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡು ಇಬ್ಬರು ವಿದೇಶಿ ಪ್ರಜೆಗಳು ಸೇರಿ ಏಳು ಡ್ರಗ್‌ ಪೆಡ್ಲರ್‌ ಗಳನ್ನು ಬಂಧಿಸಿದ್ದಾರೆ.ಕೆಜಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗೆ ವಿದೇಶದಿಂದ ಮಾದಕ ವಸ್ತು ಪಾರ್ಸಲ್‌ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪಾರ್ಸಲ್‌ನನ್ನು ತೆಗೆದು ನೋಡಿದಾಗ ಅದರಲ್ಲಿ ಮಾದಕ ವಸ್ತು 1.22 ಕೆಜಿ ಹೈಡ್ರೋ ಗಾಂಜಾ ಹಾಗೂ ಇನ್ನಿತರೆ ವಸ್ತುಗಳು ಕಂಡು ಬಂದಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು 1 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕೆಜಿನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಬಿ ಗೆ ವರ್ಗಾವಣೆ: ವಿದೇಶದಿಂದ ಅಂಚೆ ಕಚೇರಿಗೆ ಬಂದಿರುವ ಮಾದಕ ವಸ್ತುವಿನ ಬಗ್ಗೆ ಮುಂದಿನ ತನಿಖೆಗಾಗಿ ಸಿಸಿಬಿಗೆ ವರ್ಗಾಹಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಯಾವ ದೇಶದಿಂದ ಈ ಪಾರ್ಸಲ್‌ ಬಂದಿದೆ. ಯಾರು ಈ ಮಾದಕ ವಸ್ತುವನ್ನು ಯಾರಿಗೆ ಅಂಚೆ ಮೂಲಕ ಕಳುಹಿಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಇಬ್ಬರು ವಿದೇಶಿ ಪ್ರಜೆಗಳ ಬಂಧನ:
ಮೆಡಿಕಲ್‌ ವೀಸಾ ಹಾಗೂ ಸ್ಟೂಡೆಂಡ್‌ ವೀಸಾ ಪಡೆದು ನೈಜೀರಿಯಾದಿಂದ ಭಾರತಕ್ಕೆ ಬಂದು ನಂತರ ನಗರದಲ್ಲಿ ವಾಸವಾಗಿದ್ದುಕೊಂಡು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 7.80 ಕೋಟಿ ರೂ.ಮೌಲ್ಯದ 3 ಕೆಜಿ 852 ಗ್ರಾಂ ಎಂಡಿಎಂಎ ಕ್ರಿಸ್ಟಲ್‌ ಹಾಗೂ 41 ಗ್ರಾಂ 82 ಮಿ. ಎಕ್ಸ್ ಟಸಿ ಪಿಲ್ಸ್ ಗಳು ಹಾಗೂ ಕೃತ್ಯಕ್ಕೆ ಬಳಸಲಾಗುತ್ತಿದ್ದ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಜೀರಿಯಾ ದೇಶದ ಕೆವಿನ್‌ ರೋಜರ್‌ ಮತ್ತು ಥಾಮಸ್‌‍ ನವೀದ್‌ ಚೀಫ್‌ ಬಂಧಿತ ವಿದೇಶಿ ಪ್ರಜೆಗಳು. 2019 ರಲ್ಲಿ ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದಿದ್ದ ವ್ಯಕ್ತಿ ನಂತರದ ದಿನಗಳಲ್ಲಿ ದೆಹಲಿಯಲ್ಲಿ ವಾಸವಿರುವ ವಿದೇಶಿ ಪ್ರಜೆಗಳಿಂದ ಡ್ರಗ್ಸ್ ಗಳನ್ನು ಖರೀದಿಸಿ ಬೆಂಗಳೂರಿಗೆ ಬಂದು ಪರಿಚಯಿಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.
ಈತನ ವಿರುದ್ಧ 2023 ರಲ್ಲಿ ಎನ್‌ಸಿಬಿ ಘಟಕದಲ್ಲಿ ಎನ್‌ಡಿಪಿಎಸ್‌‍ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಮತ್ತೊಬ್ಬ ವಿದೇಶಿ ಪ್ರಜೆ 2019 ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದಿದ್ದಾನೆ. ಈತ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಈತನ ವಿರುದ್ಧ ಗುಜರಾತ್‌ ರಾಜ್ಯದ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು.

ಈತ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿಕೊಂಡಿದ್ದನು.ಈ ಇಬ್ಬರ ವಿರುದ್ಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಟೆಕ್ಕಿ ಬಂಧನ:
ಕೇರಳದಿಂದ ಕಡಿಮೆಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ನಗರದಲ್ಲಿ ಹೆಚ್ಚಿನ ಬೆಲೆಗೆ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಸಾಫ್‌್ಟವೇರ್‌ಎಂಜಿನಿಯರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ 75 ಲಕ್ಷ ರೂ.ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಡ್ರಗ್‌ಪೆಡ್ಲರ್‌ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿರುವ ಟೆಕ್ಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೋಜಿನ ಜೀವನಕ್ಕಾಗಿ ಅಧಿಕ ಹಣ ಸಂಪಾದಿಸಲು ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾಗಿ ತಿಳಿಸಿದ್ದಾನೆ.

ಆರೋಪಿಯಿಂದ 75 ಲಕ್ಷ ಮೌಲ್ಯದ 500 ಗ್ರಾಂ ಹೈಡ್ರೋ ಗಾಂಜಾ 1 ಕಾರು, ಬೈಕ್‌ ಹಾಗೂ ಮೊಬೈಲ್‌ ವಶಪಡಿಸಿಕೊಂಡಿದ್ದು ಈ ಬಗ್ಗೆ ಮಹದೇವಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಡೆಂಟಲ್‌ ವಿದ್ಯಾರ್ಥಿ ಸೆರೆ:
ಮೋಜಿನ ಜೀವನ ನಡೆಸಲು ಅಧಿಕ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ಹೈಡ್ರೋ ಗಾಂಜಾವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 32ಲಕ್ಷ ರೂ. ಮೌಲ್ಯದ 300 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಆಡುಗೋಡಿ ವ್ಯಾಪ್ತಿಯಲ್ಲಿ ಡ್ರಗ್‌ಪೆಡ್ಲರ್‌ಬಗ್ಗೆ ಮಾಹಿತಿಯನ್ನು ಕಲೆಹಾಕಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಸ್ಥಳದ ಮೇಲೆ ದಾಳಿ ಮಾಡಿ ಡ್ರಗ್‌ಪೆಡ್ಲರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿ ಎಂಬುವುದು ಗೊತ್ತಾಗಿದೆ.

ಮೂವರ ಡ್ರಗ್‌ಪೆಡ್ಲರ್‌ಗಳ ಸೆರೆ:
ಅಧಿಕ ಹಣ ಸಂಪಾದನೆಗಾಗಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮೂವರು ಡ್ರಗ್‌ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಪರಿಚಯಿಸ್ಥರಿಗೆ ಅಧಿಕ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದುದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿತರೆ ವ್ಯಕ್ತಿಗಳ ವಿರುದ್ಧ ತನಿಖೆ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News