ಬೆಂಗಳೂರು,ಸೆ.29- ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತರಾತುರಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಿಸಿದ್ದು, ಸಮೀಕ್ಷಾದಾರರಿಗೆ ಸರಿಯಾದ ತರಬೇತಿ ಇಲ್ಲ, ಹತ್ತು ಹಲವು ಗೊಂದಲಗಳಿಂದ ಕೂಡಿದೆ ಎಂದು ರಾಜ್ಯ ಒಕ್ಕಲಿಗರ ಸಂಘ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿವೆ. ಜಂಟಿ ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ್ದು, ತಾಂತ್ರಿಕ ಸಮಸ್ಯೆ ಪರಿಹರಿಸಿ ಸಮೀಕ್ಷೆಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ಇಲ್ಲ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಸಮೀಕ್ಷೆ ಸಂದರ್ಭದಲ್ಲಿ ಒಕ್ಕಲಿಗ ಜಾತಿಯನ್ನು ನಮೂದಿಸಲು ಹೇಳಿದರೆ ಸಮೀಕ್ಷಕರು ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ ಮಾತ್ರ ಇದೆ. ಒಕ್ಕಲಿಗ ಎಂಬುದಿಲ್ಲ ಎಂದು ಹೇಳಿದ್ದಾರೆ. ನಾನು ಖುದ್ದಾಗಿ ದೂರವಾಣಿ ಮೂಲಕ ಒಕ್ಕಲಿಗ ಜಾತಿಯ ಕೋಡ್ 1541 ಹೇಳಿ ಸರಿಯಾಗಿ ನಮೂದಿಸುವಂತೆ ಮಾಡಬೇಕಾಯಿತು ಎಂದು ನಿದರ್ಶನವನ್ನು ನೀಡಿದರು.
ನಿತ್ಯ ಸಮೀಕ್ಷೆ ಬಗ್ಗೆ ಹತ್ತು ಹಲವು ದೂರುಗಳು ಬರುತ್ತಿವೆ. ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಮಾಹಿತಿಗಾಗಿ ಆಯೋಗ ಯಾರ ಮೇಲೂ ಒತ್ತಡ ಹಾಕಬಾರದು. ಸಮೀಕ್ಷೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ. ಆದರೂ ಸಮೀಕ್ಷಾದಾರರು ಇಷ್ಟ ಬಂದಂತೆ ನಮೂದಿಸುತ್ತಿದ್ದಾರೆ. ಅನಗತ್ಯ ಗೊಂದಲ ಮೂಡಿಸುವುದು ಬೇಡ ಎಂದು ಹೇಳಿದರು.
ಜನರಿಂದ ಸರಿಯಾಗಿ ಮಾಹಿತಿ ಸಂಗ್ರಹಿಸದಿದ್ದರೆ, ಅವರ ಒಪ್ಪಿಗೆ ಇಲ್ಲದಿದ್ದರೆ ತಪ್ಪಾಗುತ್ತದೆ. ಒಕ್ಕಲಿಗ ಸಮುದಾಯದವರಲ್ಲಿ ಮನವಿ ಮಾಡುವುದಿಷ್ಟೇ. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿ, ಉಪಜಾತಿ, ಸಮಾನಾಂತರ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಿ. ತಪ್ಪದೇ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರ ಮಾಹಿತಿ ನೀಡಬೇಕು ಎಂದು ಕೋರಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾಪ್ರಸನ್ನ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿಯಲ್ಲಿ ಮಾಡಿದ ಸಮೀಕ್ಷೆಗಿಂತ ಈಗ ಮಾಡಿರುವ ಸಮೀಕ್ಷೆ ಕೆಳಮಟ್ಟದಲ್ಲಿದೆ. ಆಗ ಆಯೋಗ ಜನಸಾಮಾನ್ಯರ ಹಾಗೂ ಸಂಘ ಸಂಸ್ಥೆಗಳ ಮನವಿಗೆ ಸ್ಪಂದಿಸಿತ್ತು. ಈಗ ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ಇಲ್ಲ. ಮೊಬೈಲ್ ಆ್ಯಪ್‌ನ ತಂತ್ರಾಂಶವೂ ಸರಿ ಇಲ್ಲದೆ ನಿತ್ಯ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ.
ಒಕ್ಕಲಿಗ ಮತ್ತು ವೀರಶೈವ ಸಮುದಾಯಗಳು ಸಮೀಕ್ಷೆಗೆ ವಿರೋಧಿಸುತ್ತಿಲ್ಲ. ಆದರೆ ವೈಜ್ಞಾನಿಕವಾಗಿ ಸಮೀಕ್ಷೆಯಾಗಬೇಕು ಎಂಬುದಷ್ಟೇ ನಮ ಆಗ್ರಹ ಎಂದರು. ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಿಲ್ಲ ಎಂದು ಆಯೋಗವು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರೂ ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ. ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಸಮೀಕ್ಷೆಯನ್ನು ಆಯೋಗ ನಡೆಸುತ್ತಿದೆಯೋ ಅಥವಾ ಸರ್ಕಾರ ನಡೆಸುತ್ತಿದೆಯೋ ಎಂದು ಗೊತ್ತಿಲ್ಲ. ಈ ಬಗ್ಗೆ ಗೊಂದಲವಿದೆ. ಪ್ರತಿಯೊಂದಕ್ಕೂ ನೇರವಾಗಿ ಮುಖ್ಯಮಂತ್ರಿ ಸೂಚನೆ ನೀಡುತ್ತಾರೆ ಎಂದು ಹೇಳಿದರು.
ಸಂಗ್ರಹಿಸಲಾದ ದತ್ತಾಂಶದ ಗೌಪ್ಯತೆ ಕಾಪಾಡುವಂತೆ ನ್ಯಾಯಾಲಯ ಹೇಳಿದೆ. ಆದರೆ ಶಿಕ್ಷಕರ ಮೊಬೈಲ್‌ನಿಂದ ಡಾಟಾ ಸೋರಿಕೆಯಾಗುವುದಿಲ್ಲವೇ?, ಚುನಾವಣಾ ಆಯೋಗದ ಮೇಲೆ ಮತಗಳವು ಆರೋಪವನ್ನು ಇವರೇ ಮಾಡುತ್ತಿದ್ದಾರೆ. ಯಾವ ರೀತಿ ಗೌಪ್ಯತೆ ಕಾಪಾಡುತ್ತಾರೆ ಎಂಬ ಪ್ರಶ್ನೆ ಉಂಟಾಗಿದೆ ಎಂದರು.ಆಯೋಗವು ಪಾರದರ್ಶಕ ಮತ್ತು ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ. ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಎಂ.ನಾಗರಾಜ್ ಮಾತನಾಡಿ, ತೆಲಂಗಾಣ ರಾಜ್ಯದಲ್ಲಿ ಮೂರೂವರೆ ಕೋಟಿ ಜನಸಂಖ್ಯೆಯಿದ್ದರೂ 65 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ. ನಮ ರಾಜ್ಯದಲ್ಲಿ 1 ಕೋಟಿಯಷ್ಟಿರುವ ಪರಿಶಿಷ್ಟ ಸಮುದಾಯದ ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಯನ್ನು 45 ದಿನ ಮಾಡಲಾಗಿದೆ. ಏಳೂವರೆ ಕೋಟಿ ಜನಸಂಖ್ಯೆಯುಳ್ಳ ರಾಜ್ಯದ ಗಣತಿ ಕೇವಲ 15 ದಿನದಲ್ಲಿ ಮಾಡಲು ಸಾಧ್ಯವೇ?, ನಿತ್ಯ 50 ಲಕ್ಷ ಜನರ ಸಮೀಕ್ಷೆ ಆಗಬೇಕಿತ್ತು. ಅದು ಸಾಧ್ಯವೇ?, ಕಳೆದ ಆರು ದಿನಗಳಲ್ಲಿ 3 ಕೋಟಿ ಜನರ ಮಾಹಿತಿ ಪಡೆಯಬೇಕಿತ್ತು. ಆದರೆ ಮಾಹಿತಿ ಪಡೆದಿರುವುದು 12 ಲಕ್ಷ ಜನರಿಂದ ಮಾತ್ರ ಎಂದರು.
ಇನ್ನುಳಿದ 9 ದಿನದಲ್ಲಿ ಈ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವೇ?, ಮನೆಗಳ ಜಿಯೋ ಟ್ಯಾಗ್ ಕೂಡ ಗೊಂದಲದಲ್ಲಿದೆ. 10-15 ಕಿ.ಮೀ. ದೂರದ ಮನೆಗಳನ್ನೂ ತೋರಿಸುತ್ತದೆ. ದಸರಾ ರಜೆ ಮುಗಿಯುವುದರೊಳಗೆ ಹೇಗೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ? ಆನಂತರವೂ ಸಮೀಕ್ಷೆ ಮುಂದುವರೆಸಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸಮೀಕ್ಷಾ ಆಯೋಗ ಪೂರ್ವ ಸಿದ್ದತೆಯಿಲ್ಲದೆ ತರಾತುರಿಯಲ್ಲಿ ಸಮೀಕ್ಷೆಗೆ ಮುಂದಾಗಿರುವುದು ಗೊಂದಲಕ್ಕೀಡು ಮಾಡಿಕೊಟ್ಟಿದೆ. ಸಾಕಷ್ಟು ಕಾಲಾವಕಾಶ ನೀಡಿ ಸಮೀಕ್ಷೆ ನಡೆಸಬೇಕು ಎಂಬುದು ನಮ ಆಗ್ರಹ ಎಂದರು.
ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಟರಾಜ್ ಮಾತನಾಡಿ, ರಾತ್ರಿ ವೇಳೆಯೂ ಸಮೀಕ್ಷೆ ನಡೆಸುವ ಮೂಲಕ ಸಮೀಕ್ಷೆದಾರರಿಗೆ ಮತ್ತು ಜನರಿಗೆ ತೊಂದರೆ ಉಂಟಾಗುತ್ತಿದೆ. ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸದಿದ್ದರೆ ಸಾಮಾಜಿಕ ನ್ಯಾಯ ಹೇಗೆ ಸಿಗುತ್ತದೆ ? ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ ಯಲಚವಾಡಿ, ಉಪಾಧ್ಯಕ್ಷರಾದ ಶಿವರಾಂ, ಅಶೋಕ್, ಎಂ.ಮೋಹನ್, ವೀರಶೈವ ಮಹಾಸಭಾದ ಕಾರ್ಯದರ್ಶಿ ಮಹಂತೇಶ್, ವಿಜಯ್ ಮತ್ತಿತರರಿದ್ದರು.