ಬೆಂಗಳೂರು,ಸೆ.30-ದೇವರ ದರ್ಶನ ಪಡೆದು ಮೆಟ್ಟಿಲಿನ ಮೇಲೆ ಕುಳಿತಿದ್ದ ವೃದ್ಧೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಚಿಕ್ಕಬಾಣವಾರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ದಾಸರಹಳ್ಳಿ ನಿವಾಸಿ ಗಂಗಮ (65) ಮೃತಪಟ್ಟ ವೃದ್ಧೆ. ಕಾರು ಚಾಲಕ ಅಪಘಾತದ ನಂತರ ಪರಾರಿಯಾಗಿದ್ದಾನೆ.ನಿನ್ನೆ ಸಂಜೆ ಗಂಗಮ ಅವರು ದಾಸರಹಳ್ಳಿಯ ನೆಲಮಹೇಶ್ವರಮ ದೇವಸ್ಥಾನಕ್ಕೆ ಹೋಗಿದ್ದು, ದೇವಿ ದರ್ಶನ ಪಡೆದು ನಂತರ ಮಾರುತಿ ಮಂದಿರದಲ್ಲಿ ದರ್ಶನ ಮಾಡಿ, ಮಂದಿರದ ಮೆಟ್ಟಿಲುಗಳ ಮೇಲೆ 7 ಗಂಟೆ ಸುಮಾರಿನಲ್ಲಿ ಕುಳಿತಿದ್ದರು.
ಆ ಸಂದರ್ಭದಲ್ಲಿ ಅದೇ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದ ವ್ಯಕ್ತಿ ಪೂಜೆ ಮುಗಿಸಿಕೊಂಡು ಕಾರನ್ನು ಪಾರ್ಕ್ ಮಾಡಿದ್ದ ಸ್ಥಳದಿಂದ ತೆಗೆದುಕೊಳ್ಳುವಾಗ ಅತೀ ವೇಗವಾಗಿ ಚಾಲನೆ ಮಾಡಿದ್ದರಿಂದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಗಂಗಮ ಅವರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಗಂಗಮ ಕೆಳಗೆ ಬಿದ್ದಿದ್ದು ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಇದರಿಂದ ಗಾಬರಿಗೊಂಡ ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ.
ಅಪಘಾತ ಗಮನಿಸಿ ಸಂಬಂಧಿಯೊಬ್ಬರು ವೃದ್ಧೆಯ ಸಹಾಯಕ್ಕೆ ದಾವಿಸಿ, ಅದೇ ಕಾರಿನಲ್ಲಿ ಗಂಗಮ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ತಕ್ಷಣ ವೈದ್ಯರು ಪರೀಕ್ಷಿಸಿದ್ದು, ಈ ವೃದ್ಧೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಚಿಕ್ಕಬಾಣವಾರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರು ಚಾಲಕನ ಪತ್ತೆಗೆ ಶೋಧ ಕೈಗೊಂಡಿದ್ದಾರೆ.