ಬೆಂಗಳೂರು, ಸೆ.30- ರಾಹುಲ್ಗಾಂಧಿ ಅವರ ಎದೆಗೆ ಗುಂಡುಹಾರಿಸುತ್ತೇವೆ ಎಂದು ಬಿಜೆಪಿ ವಕ್ತಾರ ನೀಡಿರುವ ಹೇಳಿಕೆ ಬಾಯಿ ತಪ್ಪಿನಿಂದ ಬಂದಿರುವುದು ಅಲ್ಲ. ಭಾರಿ ಪಿತೂರಿ ನಡೆದಿರುವುದರ ಸಂಕೇತ ಎಂದು ಹಿರಿಯ ಕಾಂಗ್ರೆಸ್ಸಿಗ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸತ್ಯ, ಶಾಂತಿ, ಸೌಹಾರ್ದತೆ, ನ್ಯಾಯ-ನೀತಿಯ ಪ್ರತಿರೂಪವಾಗಿ ಬಾಳಿ ಬದುಕಿದ್ದ ಮಹಾತಾ ಗಾಂಧಿಯವರ ಎದೆಗೆ ಗುಂಡಿಕ್ಕಿ ಕೊಂದ ಸಂತತಿಯವರೇ ಇಂದು ದೇಶದ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಅವರ ಎದೆಗೆ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ. ಬಿಜೆಪಿಯ ಕೊಲೆಗಡುಕ ಸಂಸ್ಕೃತಿಯ ಮುಖವಾಡಕ್ಕೆ ಇದು ಕೈಗನ್ನಡಿ ಎಂದಿದ್ದಾರೆ.
ದೇಶದ ಕೋಟ್ಯಂತರ ಜನರ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಈಗಾಗಲೇ ಬಿಜೆಪಿಯ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ. ಈಗ ಪಕ್ಷದ ವಕ್ತಾರರೇ ಖಾಸಗಿ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿಯೇ ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ಮಾತಾಡಿದರೆ ಗುಂಡು ಹಾರಿಸುತ್ತೇವೆ ಎಂದು ಹೇಳಿಕೆ ನೀಡುವುದು ರಾಹುಲ್ ಗಾಂಧಿಯವರ ವಿರುದ್ಧ ಗಂಭಿರವಾಗಿ ಭಾರಿ ಪಿತೂರಿ ನಡೆಸಿರುವುದರ ಸಂಕೇತ ಎಂದು ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕರು ಕೊಲೆಗೆ ಪ್ರಚೋದನೆ ನೀಡುವುದು ಬಾಯಿ ತಪ್ಪಿನಿಂದಲ್ಲ, ಬಿಜೆಪಿಯ ಉದ್ದೇಶ ಬಹಿರಂಗಗೊಂಡಿದೆ. ಇಂತಹ ಅಪಾಯವನ್ನು ದೇಶದ ಪ್ರತಿಯೊಬ್ಬ ನಾಯಕರು ಖಂಡಿಸಬೇಕಿದೆ ಎಂದಿದ್ದಾರೆ.
ದೇಶದ ವಿರೋಧ ಪಕ್ಷದ ನಾಯಕರನ್ನೇ ಬಹಿರಂಗವಾಗಿ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎನ್ನುವುದು ಬಿಜೆಪಿಯ ದ್ವೇಷಮಯ ರಾಜಕೀಯದ ಪರಮಾವಧಿ. ಕೂಡಲೇ ಬಿಜೆಪಿ ಪಕ್ಷ ಕೊಲೆ ಹೇಳಿಕೆ ನೀಡಿರುವ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.