ಬೆಂಗಳೂರು, ಸೆ.30- ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ ಪೆಕ್ಟರ್, ಕಾನ್ಸ್ ಟೆಬಲ್ ಹುದ್ದೆಗಳ ನೇಮಕಾತಿಗೆ ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಒಂದುವಾರದೊಳಗಾಗಿ ವೃಂದಾ ಮತ್ತು ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿ ಇರುವುದಾಗಿ ಗೃಹ ಸಚಿವ ಡಾ. ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಯ ಕಾರಣಕ್ಕಾಗಿ ನೇಮಕಾತಿಗಳು ನಡೆಯದೇ ಬಹಳಷ್ಟು ಮಂದಿ ಅವಕಾಶ ವಂಚಿತರಾಗುತ್ತಿದ್ದರು. ಅಂತವರಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಅವಧಿಗೆ ಸೀಮಿತಗೊಂಡಂತೆ 2027ರ ವರೆಗೆ ಎಲ್ಲಾ ಇಲಾಖೆಯ ನೇಮಕಾತಿಗಳಲ್ಲೂ ವಯೋಮಿತಿ ಸಡಿಲಿಸಿದ್ದಾರೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಬೇರೆಬೇರೆ ರಾಜ್ಯಗಳಲ್ಲಿರುವ ವಯೋಮಿತಿಯ ಮಾಹಿತಿಯನ್ನು ಪಡೆಯಲಾಗಿದೆ. ಹಲವು ರಾಜ್ಯಗಳಲ್ಲಿ 27,30,33 ವರ್ಷಗಳವರೆಗೂ ವಯೋಮಿತಿ ಸಡಿಲಿಕೆಯಿದೆ. ನಮಲ್ಲೂ ಕಾನ್್ಸಟೆಬಲ್ ಮತ್ತು ಪೊಲೀಸ್ ಸಬ್ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಶಾಶ್ವತವಾಗಿ ವಯೋಮಿತಿ ಸಡಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ವಿಳಂಬವಾಗುತ್ತಿದೆ ಎಂಬುವುದು ಸರಿಯಲ್ಲ. ಷಡ್ಯಂತ್ರ ಮಾಡಿದವರನ್ನು ಬಂಧಿಸಲು ಕಾನೂನಿನ ತೊಡಕುಗಳಿವೆ. ಬಹಳಷ್ಟು ವಿಚಾರಗಳಲ್ಲಿ ಎಫ್ಎಸ್ಎಲ್ ವರದಿಗಳು ಬಾಕಿ ಇವೆ. ಎಸ್ಐಟಿ ಅಧಿಕಾರಿಗಳು ತಮ ಪಾಲಿನ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವರೆಗೂ ಸಿಕ್ಕಿರುವ ಕೆಲ ಅಂಶಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಮೊದಲು ಸಿಕ್ಕಿರುವ ಅಂಶಗಳನ್ನು ಕ್ರೊಡೀಕರಿಸಿದ್ದಾರೆ. ಶೀಘ್ರದಲ್ಲೇ ತನಿಖೆ ಪೂರ್ಣ ಗೊಳಿಸಲು ಸೂಚಿಸಲಾಗಿದೆ ಎಂದರು.
ಈ ನಡುವೆ ಸಿಕ್ಕವರೆಲ್ಲಾ ಅರ್ಜಿ ಕೊಡುತ್ತಿದ್ದಾರೆ. ಅಲ್ಲಿ ಮೂಳೆಗಳಿವೆ. ಇಲ್ಲಿ ಮೂಳೆಗಳಿವೆ ಎಂದು ಹೇಳುತ್ತಿದ್ದಾರೆ. ಇಂತಹ ವಿಚಾರಗಳಿಗೆ ಕೊನೆಯಾಡಬೇಕಿದೆ ಎಂದರು.ಮಹೇಶ್ ತಿಮರೋಡಿ ಗಡಿಪಾರು ಪ್ರಕರಣವನ್ನು ನ್ಯಾಯಾಲದಲ್ಲಿ ಪ್ರಶ್ನಿಸಲಾಗಿದೆ. ಅಲ್ಲಿನ ತೀರ್ಪನ್ನು ಕಾಯುತ್ತಿದ್ದೇವೆ. ಎಲ್ಲವನ್ನೂ ಕಾನೂನಿನ ಪ್ರಕಾರವೇ ಬಂಧನ ಸೇರಿದಂತೆ ಎಲ್ಲಾ ಪ್ರಕ್ರಿಯಗಳನ್ನು ನಡೆಸಲಾಗುತ್ತದೆ. ಎಸ್ಐಟಿಗೆ ಸರ್ಕಾರ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ ಎಂದರು.
ತನಿಖೆಯ ಹಂತದಲ್ಲಿ ಇಂತಿಷ್ಟೇ ಕಾಲಮಿತಿ ಎಂದು ನಿಗಧಿಪಡಿಸಲು ಸಾಧ್ಯವಿಲ್ಲ. ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಪ್ರಮುಖ ಮಾಹಿತಿಗಳ ಅಗತ್ಯವಿರುತ್ತದೆ. ಎಫ್ಎಸ್ಎಲ್ನ ವರದಿ ಅಂತಿಮಗೊಳ್ಳಬೇಕು. ಸುಪ್ರೀಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಗೊಂಡಿರುವ ವಿಚಾರವನ್ನು ಎಸ್ಐಟಿ ಅಧಿಕಾರಿಗಳು ಪರಿಗಣಿಸಿ ತಮ ವರದಿಯಲ್ಲಿ ಉಲ್ಲೇಖಿಸಬಹುದು ಎಂದು ಪರಮೇಶ್ವರ್ ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವೇಳೆ ಮಾಹಿತಿ ಕೊಡಬಾರದು ಜನ ಬಹಿಷ್ಕಾರ ಹಾಕಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿಸೂರ್ಯ ಹೇಳಿಕೆ ಸರಿಯಲ್ಲ. 2026ರಲ್ಲಿ ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ನಡೆಸಲಿದೆ. ಆ ಸಂದರ್ಭದಲ್ಲಿ ಬೇರೆಯರು ಮತ್ತೊಂದು ರೀತಿಯ ಹೇಳಿಕೆ ನೀಡುವಂತಾಗಬಾರದು. ಕೇಂದ್ರ ಸರ್ಕಾರದ ಜನಗಣತಿಯಲ್ಲಿ ಭಾಗವಹಿಸಬೇಡಿ ಎಂದು ಹೇಳಿದರೆ ಸರಿಹೋಗಲಿದೆಯೇ ಎಂದರು.
ಶೈಕ್ಷಣಿಕ ಸಾಮಾಜಿಕ ಸಮೀಕ್ಷೆಯಲ್ಲಿ ದುರುಪಯೋಗವಾಗುವಂತಹದು ಏನಿದೆ? ಜನರ ಸ್ಥಿತಿಗತಿ ತಿಳಿದುಕೊಳ್ಳುವ ಸಲುವಾಗಿಯೇ ಸಮೀಕ್ಷೆ ನಡೆಸಲಾಗುತ್ತಿದೆ. ಅದಕ್ಕೂ ಅಡ್ಡಿ ಪಡಿಸಲಾಗುತ್ತಿದೆ. ವಾಸ್ತವಾಂಶಗಳ ಮಾಹಿತಿ ಸಿಗದೇ ಇದ್ದರೆ, ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಸಮೀಕ್ಷೆ ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳ್ಳಲಿದೆ. ಉದಾಹರಣೆಗೆ ತುಮಕೂರು ಜಿಲ್ಲೆಯಲ್ಲಿ 7 ಲಕ್ಷ ಕುಟುಂಬಗಳಿವೆ. ಈಗಾಗಲೇ 2 ಲಕ್ಷ ಕುಟುಂಗಳು ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಕಾಲಾವದಿಯಲ್ಲಿ ಬಾಕಿ ಮನೆಗಳ ಸಮೀಕ್ಷೆ ಮುಗಿಯಲಿದೆ ಎಂದು ಹೇಳಿದರು.
ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಯಾವುದೇ ಗೊಂದಲಗಳಿಲ್ಲ ಮುಖ್ಯಮಂತ್ರಿ ಅವರರ ಹಿಡಿತ ಸಡಿಲವಾಗುತ್ತಿದೆ ಎಂಬುದನ್ನು ಸದ್ಯಕ್ಕೆ ದೂರವಾದ ವಿಚಾರ. ಪಕ್ಷದ ಅಧ್ಯಕ್ಷರೂ, ಮುಖ್ಯಮಂತ್ರಿ ಅವರು ಚರ್ಚೆ ಮಾಡಿ ಹೈಕಮಾಂಡ್ ಅವರ ಗಮನಕ್ಕೆ ತಂದು ನೇಮಕಾತಿ ಮಾಡಲಾಗುತ್ತಿದೆ. ಈ ಹಿಂದೆ ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿ ನಡೆದಿತ್ತು. ಹೈಕಮಾಂಡ್ಗೆ ಪಟ್ಟಿ ಸಲ್ಲಿಸಿ ಅನುಮತಿ ಪಡೆದು ನಂತರ ನೇಮಕಾತಿ ಪಡೆಯುವ ಪರಿಪಾಟ ಇಲ್ಲ.
ನಿಗಮ ಮಂಡಳಿಗಳ ನಿರ್ದೇಶಕರ ನೇಮಕಾತಿಗೆ 11 ಜನರ ಸಮಿತಿಯನ್ನು ತಮ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ನಾವು ಪಟ್ಟಿ ನೀಡಿದ್ದೇವೆ. ಅದರಲ್ಲಿ ಸೇರ್ಪಡೆ ಹಾಗೂ ತೆಗೆದುಹಾಕುವ ಮೂಲಕ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದರು.
ಶೇ.50 ರಷ್ಟು ಸಚಿವರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆ ತಮಗೆ ಗೊತ್ತಿಲ್ಲ. ಸಂಪುಟ ವಿಚಾರದಲ್ಲಿ ಸಿಎಂ ಮತ್ತು ಹೈಕಮಾಂಡ್ನ ವಿವೇಚನೆಗೆ ಬಿಟ್ಟಿದೆ. ಎರಡೂವರೆ ವರ್ಷದಲ್ಲಿ ಬದಲಾವಣೆ ಬಗ್ಗೆ ತಮಗೆ ಗೊತ್ತಿಲ್ಲ. ಹೈಕಮಾಂಡ್ ಸೇರಿದಂತೆ ಯಾರೂ ತಮ ಬಳಿ ಈ ವಿಚಾರ ಚರ್ಚೆಯಾಗಿಲ್ಲ ಎಂದರು.
ತುಮಕೂರನ್ನು ವಿಸ್ತರಣೆ ಮಾಡಿ, ಗ್ರೇಟರ್ ತುಮಕೂರು ರಚನೆ ಮಾಡಲು ನಾವು ಚರ್ಚೆ ಮಾಡಿದ್ದೇವೆ. ಕುಣಿಗಲ್ ತಾಲ್ಲೂಕ ಅನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.ತುಮಕೂರು ದಸರಾ ಹಬ್ಬದ ವಾತಾವರಣ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.