ನವದೆಹಲಿ,ಸೆ.30- ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳದೆ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಉತ್ತಮ ಮಳೆಯಾಗಿ, ಹಲವು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರಿಗೂ ಖುಷಿಯಾಗಿತ್ತು. ಆದರೆ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿದೆ ಎಂದರು.
ಪ್ರವಾಹಪೀಡಿತ 6 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ ಎಂಬ ಮಾಹಿತಿ ಇದೆ. ಮನೆಗಳಿಗೂ ನೀರು ನುಗ್ಗಿ ನಷ್ಟವಾಗಿದೆ. 12 ಗೋಶಾಲೆಗಳು ಮುಳುಗಿವೆ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ 4.50 ಲಕ್ಷ ಕ್ಯೂಸೆಕ್ಸ್ ನಷ್ಟು ನೀರು ಹರಿದುಬರುತ್ತಿರುವುದರಿಂದ ದೊಡ್ಡಮಟ್ಟದಲ್ಲಿ ಅನಾಹುತ ಉಂಟಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದರೂ ಯಾವೊಬ್ಬ ಸಚಿವರೂ ಭೇಟಿ ಕೊಟ್ಟು ಸಂತ್ರಸ್ತ ಜನರಿಗೆ ಧೈರ್ಯ ತುಂಬಿಲ್ಲ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಪ್ರವಾಹ ಉಂಟಾಗುತ್ತಿದ್ದು, ಪರಿಹಾರ ಕ್ರಮಗಳು ಆಗಿಲ್ಲ, ರೈತರಿಗೆ ಸರಿಯಾಗಿ ಸಾಲ ಸಿಗುತ್ತಿಲ್ಲ, 2 ದಿನಗಳ ಹಿಂದೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಮುಂದಾಗಿದ್ದೆ. ಹವಾಮಾನ ವೈಪರೀತ್ಯದ ಕಾರಣ ಅಧಿಕಾರಿಗಳು ಬೇಡ ಎಂದಿದ್ದರು. ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿ ಎಂದು ಹೇಳಿದರು.
ಎಸಿ ರೂಂಗಳಲ್ಲಿರುವ ಮಂತ್ರಿಗಳನ್ನು ಪ್ರವಾಹಪೀಡಿತ ಪ್ರದೇಶಗಳಿಗೆ ಕಳುಹಿಸಿ. ಮಹಾರಾಷ್ಟ್ರದಲ್ಲಿ ಚೆಕ್ ಡ್ಯಾಂ ನಿರ್ಮಿಸಿ ನೀರು ನಿಲ್ಲಿಸಿ ಈಗ ಏಕಾಏಕಿ ಬಿಡುತ್ತಿದ್ದಾರೆ? ಈ ವಿಷಯ ಗೊತ್ತಿದ್ದರೂ ಸಚಿವ ಎಂ.ಬಿ.ಪಾಟೀಲ್ ಮೌನವಾಗಿ ಕೂತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರ ಧಂಗಳು ಈಗ ಎಲ್ಲಿ ಹೋಗಿವೆ?, ಪಾದಯಾತ್ರೆ ಮಾಡಿದ್ದರಲ್ಲವೇ? ಎಂದು ಪ್ರಶ್ನಿಸಿದ ಅವರು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಜೊತೆ ಸರಿದೂಗಿಸಿಕೊಂಡು ಹೋಗುತ್ತಿಲ್ಲ. ಒಂದೂವರೆ ವರ್ಷದಲ್ಲಿ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಬರೀ ಬಯ್ಯುವುದೇ ಆಯಿತು. ಇದರ ಬದಲು ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಎಂದು ಹೇಳಿದರು.
ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಬೆಳೆನಾಶ ಹಾಗೂ ಮಳೆಹಾನಿಗೆ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ನನಗೆ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಪ್ರವಾಹಪೀಡಿತ ಪ್ರದೇಶದಲ್ಲಿ ಒಂದು ವಾರ ಬಿಡಾರ ಹೂಡುತ್ತಿದ್ದೆ ಎಂದು ಹೇಳಿದರು.
ಪದೇಪದೇ ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಮಾಡಿಕೊಳ್ಳಬೇಡಿ. ವಿಶ್ವಾಸವಿಟ್ಟು ಸರಿಯಾದ ರೀತಿಯಲ್ಲಿ ನೆರವು ಕೇಳಿದರೆ ಸಿಗುತ್ತದೆ. ಈತನಕ ಕೇಂದ್ರ ಸಚಿವರನ್ನು ಯಾರೂ ಭೇಟಿ ಮಾಡಿಲ್ಲ. ಬೇಕಿಲ್ಲದ ವಿಷಯಗಳತ್ತ ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಅವರು ಟೀಕಿಸಿದರು.
ಬೆಂಗಳೂರಿನ ಉಸ್ತುವಾರಿ ಸಚಿವರು ಭಾರೀ ಬ್ಯುಸಿಯಾಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಮುಖ್ಯಮಂತ್ರಿ ಮುಚ್ಚಿದ ಗುಂಡಿ ನೋಡಿಕೊಂಡು ಮುಂದೆ ಹೋಗುತ್ತಿದ್ದರೆ. ಹಿಂದೆ ಹಾಕಿದ್ದ ಟಾರು ಕಿತ್ತುಕೊಂಡು ಹೋಗುತ್ತಿತ್ತು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ದಸರಾ ಹಬ್ಬದ ಹೆಸರಿನಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ಖಾಸಗಿ ಬಸ್ ಪ್ರಯಾಣದರಕ್ಕೆ ಪೈಪೋಟಿಗಿಳಿದು ಬಸ್ ದರ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.ಕಳೆದ 2006 ರಲ್ಲಿ 5 ಟೌನ್ಶಿಪ್ ನಿರ್ಮಿಸುವ ನಿರ್ಧಾರ ಮಾಡಿದ್ದು ನಿಜ. ಬಿಡದಿಯ ಟೌನ್ಶಿಪ್ ಬಗ್ಗೆ ಕಾಂಗ್ರೆಸ್ ನಾಯಕರೇ ಮಾಡಿದ ಸತ್ಯಶೋಧನಾ ಸಮಿತಿಯ ವರದಿಯನ್ನೊಮೆ ನೋಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದರು.
ಬಿಡದಿ ಬಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಾನು ಮಾಡಿರಲಿಲ್ಲ. ಈಗಾಗಲೇ 2-3 ಸಾವಿರ ಎಕರೆ ಭೂಮಿ ಕಥೆ ಏನಾಗಿದೆ? ಈ ವ್ಯವಸ್ಥೆಯಲ್ಲಿ ನೀವು ಮಾಡಿದ ಕರ್ಮ ತೊಳೆಯಲು ಆಗುವುದಿಲ್ಲ. ಕರ್ನಾಟಕದ ಸಂಪತ್ತು ಲೂಟಿ ಹೊಡೆಯುವುದನ್ನು ತಡೆಯಲು ಜನರು 5 ವರ್ಷ ಅಧಿಕಾರವನ್ನು ನೀಡಬೇಕು ಎಂದರು.
ಉಪಮುಖ್ಯಮಂತ್ರಿಯವರು ಎದೆಮುಟ್ಟಿ ಹೇಳಲಿ ಶಾಂತಿನಗರ ಹೌಸಿಂಗ್ ಸೊಸೈಟಿ ಹಾಗೂ ಎನ್ಟಿಐ ಪ್ರಕರಣಗಳೇನು ಎಂಬುದು ನನ್ನ ಬಳಿ ಎಲ್ಲಾ ದಾಖಲೆಗಳೂ ಇವೆ ಎಂದು ಹೇಳಿದರು.ಬೆಂಗಳೂರಿನ 59 ರಸ್ತೆಗಳನ್ನು ನನ್ನ ಅವಧಿಯಲ್ಲಿ ಅಭಿವೃದ್ಧಿ ಮಾಡಿದ್ದರೂ ಪ್ರಚಾರ ಪಡೆಯಲಿಲ್ಲ. ಸಿದ್ದರಾಮಯ್ಯ ಅವರೇ ನಿಮನ್ನು ಗೆಲ್ಲಿಸಿದ ಜನರ ಋಣ ತೀರಿಸಿ. ಜಾತಿಗಣತಿಯಿಂದ ಎಲ್ಲರ ಉದ್ಧಾರ ಆಗುವುದಿಲ್ಲ. ರಾಜಕೀಯಕ್ಕಾಗಿ ಮಾಡುತ್ತಿದ್ದೀರಿ. ಬಡವರ ನೆರವಿಗೆ ಬನ್ನಿ. ಜಾತಿಜಾತಿ ನಡುವೆ ಸಂಘರ್ಷ ತಂದಿಟ್ಟಿದ್ದೀರಿ ಎಂದು ಆರೋಪಿಸಿದರು. ಭಾವ ಮೈದುನನಿಗೆ ಅನುಕೂಲ ಮಾಡಿಕೊಡಲು ಕುಣಿಗಲ್ ಅನ್ನು ತುಮಕೂರಿನಿಂದ ಬೆಂಗಳೂರು ದಕ್ಷಿಣಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇವರನ್ನು ಬಿಟ್ಟರೆ ಮಂಗಳೂರನ್ನೂ ಬೆಂಗಳೂರಿಗೆ ಸೇರಿಸುತ್ತಾರೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.