ಬೆಂಗಳೂರು,ಸೆ.30– ಆಯುಧ ಪೂಜೆ ಹಾಗೂ ವಿಜಯದಶಮಿ ರಜೆ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಪ್ರಯಾಣ ಬೆಳೆಸಿದ್ದು, ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿತ್ತು.
ನಾಳೆ ವಿಜಯದಶಮಿ, ಗುರುವಾರ ಆಯುಧಪೂಜೆಯ ನಿಮಿತ್ತ ಕಚೇರಿಗಳಿಗೆ ರಜೆ ಹಾಗೂ ಶಾಲಾ-ಕಾಲೇಜುಗಳಿಗೆ ದಸರಾ ರಜೆ ಇರುವುದರಿಂದ ಜನರು ತಮತಮ ಊರುಗಳು, ಪ್ರವಾಸಿತಾಣದತ್ತ ತೆರಳುತ್ತಿದ್ದಾರೆ.
ಕೆಎಸ್ಆರ್ಟಿಸಿಯಿಂದ ಹಬ್ಬದ ಅಂಗವಾಗಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸಿದ್ದು, ಕೆಂಪೇಗೌಡ ಬಸ್ ನಿಲ್ದಾಣ, ವಿಜಯನಗರ, ಶಾಂತಿನಗರ, ಸ್ಯಾಟಲೈಟ್ ಸುತ್ತಮುತ್ತ ಬಸ್ ನಿಲ್ದಾಣಗಳಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಕಾರ್ಯಾಚರಣೆ ಮಾಡುತ್ತಿದ್ದು, ಜನರು ಬಸ್ಗಳಿಗಾಗಿ ಕಾದು ನಿಂತಿದ್ದ ದೃಶ್ಯಗಳು ಕಂಡುಬಂದವು.
ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಬಳ್ಳಾರಿ, ರಾಯಚೂರು, ಮಡಿಕೇರಿ, ಧರ್ಮಸ್ಥಳ, ಕುಕ್ಕೆಸುಬ್ರಹಣ್ಯ, ಹೊರನಾಡು, ಶೃಂಗೇರಿ ಮತ್ತಿತರ ಸ್ಥಳಗಳಿಗೆ ಕೆಲ ಪ್ರಯಾಣಿಕರು ಮುಂಗಡವಾಗಿ ಹೋಗುವ ಮತ್ತು ಬರುವ ಟಿಕೆಟ್ಗಳನ್ನು ಬುಕ್ಕಿಂಗ್ ಮಾಡಿಕೊಂಡಿದ್ದರೆ, ಇನ್ನು ಕೆಲವರು ಟಿಕೆಟ್ ಪಡೆದು ಪ್ರಯಾಣ ಬೆಳೆಸಿದ್ದಾರೆ. ಇದರ ಜೊತೆಗೆ ಖಾಸಗಿ ಟ್ರಾವೆಲ್್ಸ, ರೈಲುಗಳ ಮುಖಾಂತರವೂ ಸಹ ಬುಕ್ಕಿಂಗ್ ಮಾಡಿಕೊಂಡು ತೆರಳುತ್ತಿದ್ದಾರೆ. ಇನ್ನೂ ಕೆಲವರು ಇಂದು ಕಚೇರಿಗಳ ಪೂಜೆ ಮುಗಿಸಿಕೊಂಡು ಸ್ವಂತ ವಾಹನಗಳು ಮತ್ತು ಸಾರಿಗೆ ಬಸ್ಗಳಲ್ಲಿ ಪ್ರಯಾಣ ಬೆಳೆಸಲಿದ್ದಾರೆ.
ರಾತ್ರಿ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಜೊತೆಗೆ ಪ್ರಮುಖ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ತುಮಕೂರು ರಸ್ತೆಯ ಯಶವಂತಪುರ, ಗೊರಗುಂಟೆಪಾಳ್ಯ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್, ನೆಲಮಂಗಲ ಟೋಲ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.
ಸಾಮಾನ್ಯವಾಗಿ ಶುಕ್ರವಾರ ಮತ್ತು ಶನಿವಾರ ರಜೆ ಹಾಕಿಕೊಂಡರೆ ಮತ್ತೆ ಭಾನುವಾರ ಮತ್ತೊಂದು ರಜೆ ಸಿಗಲಿದ್ದು, ಇನ್ನು ಸೋಮವಾರವೇ ಜನರು ಬೆಂಗಳೂರಿನತ್ತ ಬರಲಿದ್ದಾರೆ.