ಬೆಂಗಳೂರು,ಸೆ.30- ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ಆಯುಧ ಪೂಜೆ ದಿನವಾದ ನಾಳೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರ ಮಳಿಗೆಗಳು, ಗೋದಾಮು, ಕಾರ್ಖಾನೆಗಳಲ್ಲಿ ಇಂದೇ ಪೂಜೆ ನೆರವೇರಿಸಲಾಗಿದ್ದು, ಹೀಗಾಗಿ ಎರಡು ದಿನಗಳ ಮುಂಚಿತವಾಗಿಯೇ ಜನರು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂದವು.
ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಗಾಂಧಿಬಜಾರ್, ವಿಜಯನಗರ, ಉಲ್ಲಾಳ ಮುಖ್ಯರಸ್ತೆ, ಮಹಾಲಕ್ಷ್ಮಿ ಲೇ ಔಟ್, ರಾಜಾಜಿನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂ-ಹಣ್ಣು, ಬಾಳೆಕಂದು, ನಿಂಬೆಹಣ್ಣು, ಬೂದುಕುಂಬಳಕಾಯಿ, ಕಡ್ಲೆಪುರಿ, ಸಿಹಿ ಪದಾರ್ಥಗಳ ಮಾರಾಟ ದೃಶ್ಯಗಳು ಕಂಡುಬಂದವು.
ವಾಹನಗಳಿಗೆ ಹಾಗೂ ಕಾರ್ಖಾನೆಗಳ ಯಂತ್ರೋಪಕರಣಗಳಿಗೆ ಹೆಚ್ಚಾಗಿ ಬಳಕೆಯಾಗುವ ಬೂದುಕುಂಬಳಕಾಯಿ ಬೆಲೆ ಹೆಚ್ಚಾಗಿದ್ದು, ಸಗಟು ದರದಲ್ಲಿ ಕೆಜಿಗೆ 25 ರೂ.ಗಳಿಂದ 30 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆಯಾಗಿ ಕೆಜಿಗೆ 40 ರಿಂದ 60 ರೂ. ಮಾರಾಟ ಮಾಡಲಾಗುತ್ತಿದೆ. ಇನ್ನೂ ಹಲವೆಡೆ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ.
ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಲೋಡ್‌ಗಟ್ಟಲೆ ಬೂದುಕುಂಬಳಕಾಯಿ ಬಂದಿದೆ. ಬೇಡಿಕೆ ಹೆಚ್ಚಾದ್ದರಿಂದ ಬೆಲೆಯೂ ಸಹ ಹೆಚ್ಚಳವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಸೇವಂತಿ ಮಾರು 150 ರೂ., ಕೆಜಿಗೆ 200 ರೂ. ಚೆಂಡು ಹೂವಿನ ಬೆಲೆಯೂ ಸಹ ತುಸು ಏರಿಕೆಯಾಗಿದ್ದು, ಕೆಜಿಗೆ 50 ರೂ.ಗಳಿಂದ 60 ರೂ. , ಮಲ್ಲಿಗೆ 400 ರೂ.ಗಳಿಂದ 800 ರೂ., ಗುಲಾಬಿ 300 ರೂ., ಕನಕಾಂಬರ 1000 ರೂ., ಸುಗಂಧರಾಜ 300 ರೂ.ಗಳಿಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ದಾಳಿಂಬೆ 150 ರೂ., ಸೇಬು 150 ರೂ.ಗಳಿಂದ 200, ಮೂಸಂಬೆ 80 ರಿಂದ 100, ಏಲಕ್ಕಿ ಬಾಳೆ 120 ರೂ., ಪಚ್ಚಬಾಳೆ 50 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಜೋಡಿ ಬಾಳೆಕಂದು ಗಾತ್ರಕ್ಕೆ ತಕ್ಕಂತೆ 50 ರೂ.ಗಳಿಂದ 500 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ.