ಬೆಂಗಳೂರು. ಸೆ.30- ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಹಾಗೂ ನಿಗೂಢವಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟ ನಡೆಸುತ್ತಿದ್ದ ಮಹೇಶ್ ತಿಮರೋಡಿ ಗಡಿಪಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮನ್ನು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿರುವುದನ್ನು ಪ್ರಶ್ನಿಸಿ ತಿಮರೋಡಿ ಪರ ವಕೀಲರು ಹೈಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ರಜಾಕಾಲೀನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಗಡಿಪಾರಿಗೆ ತಡೆಯಾಜ್ಞೆ ನೀಡಿ ಆರೋಪಿ ವಿರುದ್ದ ಯಾವುದೇ ರೀತಿಯ ಬಲವಂತದ ಕ್ರಮ ಬೇಡ ಎಂದು ನಿರ್ದೇಶನ ನೀಡಿತು.
ಮುಂದಿನ ಅ.8ರವರೆಗೆ ಗಡಿಪಾರು ಮಾಡದಂತೆ ಸೂಚನೆ ನೀಡಿದ ನ್ಯಾಯಾಧೀಶರು ರಾಜ್ಯ ಗೃಹ ಇಲಾಖೆ ಪುತ್ತೂರು ಸಹಾಯಕ ಆಯುಕ್ತರು, ಭಂಟ್ವಾಳ ಉಪವಿಭಾಗದ ಉಪಪೊಲೀಸ್ ವರಿಷ್ಠಾಧಿಕಾರಿ ಮತ್ತು ಬೆಳ್ತಂಗಡಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರಿಗೂ ನೋಟಿಸ್ ಜಾರಿ ಮಾಡಿದೆ.
ತಮ ವಿರುದ್ಧ ಹೊರಡಿಸಿರು ಗಡಿಪಾರು ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಆದೇಶ ಜಾರಿಗೆ ತಡೆ ನೀಡುವಂತೆ ತಿಮರೋಡಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು.
ಪ್ರಕರಣದ ಹಿನ್ನಲೆ:
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು.
ಮಹೇಶ್ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಮಂಗಳೂರಿನಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿತ್ತು.
ಪೊಲೀಸರು ಅಥವಾ ನ್ಯಾಯಾಲಯದ ಸೂಚನೆಗಳು ಅಗತ್ಯವಿದ್ದಾಗ ಮಾತ್ರ ತಿಮರೋಡಿ ಈ ಜಿಲ್ಲೆಯನ್ನು ಪ್ರವೇಶಿಸಬಹುದು. ಪೊಲೀಸರ ಪರವಾಗಿ ಬಂಟ್ವಾಳ ಉಪ ಪೊಲೀಸ್ ವರಿಷ್ಠಾಧಿಕಾರಿಮತ್ತು ತಿಮರೋಡಿ ಪರ ವಕೀಲರು ಈ ವಿಷಯಕ್ಕೆ ಕಾನೂನು ಪ್ರಾತಿನಿಧ್ಯವನ್ನು ಒದಗಿಸಿದ್ದು ಅಗತ್ಯವಿದ್ದರೆ ತಿಮರೋಡಿ ಸರ್ಕಾರ ಅಥವಾ ಹೈಕೋರ್ಟ್‌ನಲ್ಲಿ ವರ್ಗಾವಣೆ ಆದೇಶದ ಪುನರ್ವಿಮರ್ಶೆ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.
ಕೆಲವು ದಿನಗಳ ಹಿಂದೆ, ಅವರ ಮನೆಯಲ್ಲಿ ಒಂದು ಚಾಕು ಮತ್ತು ಬಂದೂಕುಗಳು ಸಹ ಪತ್ತೆಯಾಗಿದ್ದವು. ಪೊಲೀಸರ ಪ್ರಕಾರ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ
ನಾಲ್ಕು ಪ್ರಕರಣಗಳು ದಾಖಲಾಗಿತ್ತು. ಇವುಗಳ ಜೊತೆ ಬ್ರಹಾವರ ಪೊಲೀಸ್ ಠಾಣೆಯ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣವನ್ನು ಈಗಾಗಲೇ ಬೆಳ್ತಂಗಡಿಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಜಪ್ತಿ ಪ್ರಕ್ರಿಯೆಯ ಸಮಯದಲ್ಲಿ ತಿಮರೋಡಿ ಪೊಲೀಸರ ತಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪ ಎದುರಿಸುತ್ತಿದ್ದಾರೆ.