Friday, October 3, 2025
Homeರಾಜ್ಯಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ನಿಲ್ಲಿಸಲು ಸರ್ಕಾರ ಸಂಚು : ಆರ್‌.ಅಶೋಕ್‌

ಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ನಿಲ್ಲಿಸಲು ಸರ್ಕಾರ ಸಂಚು : ಆರ್‌.ಅಶೋಕ್‌

Government plot to stop guarantees through survey: R. Ashok

ಬೆಂಗಳೂರು,ಸೆ.30- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ರಾಜ್ಯಾದ್ಯಂತ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕಯ ಉದ್ದೇಶವೇ ಗ್ಯಾರಂಟಿಗಳನ್ನು ಕಡಿತ ಮಾಡುವ ಏಕೈಕ ಗುರಿಯಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮತ್ತೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ನೀಡಿದ ಹೇಳಿಕೆಗೆ ಬದ್ದನಾಗಿದ್ದೇನೆ. ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮೂಲಕ ಗ್ಯಾರಂಟಿಗಳನ್ನು ಬಂದ್‌ ಮಾಡಲು ಸಂಚು ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಜನರಿಗೆ ಗೊತ್ತಾಗಲಿದೆ ಎಂದು ಎಚ್ಚರಿಸಿದರು.

ಮಾಹಿತಿ ಪಡೆಯಲು ಬಲವಂತ ಮಾಡುವಂತಿಲ್ಲ ಎಂದು ಕೋರ್ಟ್‌ ಹೇಳಿದೆ. ಆದರೆ ಇವರು ಜನರ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ನ್ಯಾಯಾಲಯ ಹೇಳಿದಂತೆ ಸಮೀಕ್ಷೆ ನಡೆಯುತ್ತಿಲ್ಲ. ಇದು ಸಿದ್ದರಾಮಯ್ಯ ಅವರ ಸಮೀಕ್ಷೆ. ಗ್ಯಾರಂಟಿಗಳನ್ನು ಕಟ್‌ ಮಾಡಲು ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವ ಪುರುಷಾರ್ಥಕ್ಕೆ ಹದಿನೈದೇ ದಿನ ನಿಗಧಿ ಮಾಡಿದ್ದೀರಿ? ತರಬೇತಿ ಕೊಡದೇ ಸಮೀಕ್ಷೆಗೆ ಗಣತಿದಾರರನ್ನು ಕಳಿಸಿದ್ದಾರೆ. ಹದಿನೈದು ದಿನಗಳಲ್ಲಿ ಪ್ರಳಯ ಆಗುತ್ತಾ? ಕೇಂದ್ರದ ಗಣತಿಯನ್ನೂ ತಪ್ಪು ದಾರಿಗೆ ಎಳೆಯಲು ಈಗಿಂದಲೇ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ಗೊಂದಲ ಸೃಷ್ಟಿಸುತ್ತಿದ್ದಾರೆ. ದುರುದ್ದೇಶ ಸ್ವಾರ್ಥ, ದುರುಳತನ ಇರುವ ಸಮೀಕ್ಷೆ ಇದು ಎಂದು ಕಿಡಿಕಾರಿದರು.

ಹಲವು ಜಾತಿ ಸಮುದಾಯಗಳು ಸಮೀಕ್ಷೆ ಅವೈಜ್ಞಾನಿಕ ಎನ್ನುತಿವೆ. ಸಮೀಕ್ಷೆಯಲ್ಲಿ ಭಾಗವಹಿಸುವುದು, ಬಿಡುವುದು ಜನರ ವಿವೇಚನೆಗೆ ಬಿಟ್ಟ ವಿಚಾರ. ಕೋರ್ಟ್‌ ಕೂಡ ಕಡ್ಡಾಯವಲ್ಲ ಎಂದೇ ಹೇಳಿದೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿರುವುದು ಸಂವಿಧಾನದ ಪ್ರಕಾರ. ಆದರೆ ರಾಜ್ಯ ಸರ್ಕಾರ ಮಾಡುತ್ತಿರುವುದು ಸಂವಿಧಾನ ಪ್ರಕಾರ ಅಲ್ಲ. ತೇಜಸ್ವಿ ಸೂರ್ಯ ಅವರು ತಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ.

ಕೋರ್ಟ್‌ ಪ್ರಕಾರ, ಇಷ್ಟವಿದ್ದರೆ ಮಾಹಿತಿ ಕೊಡಬಹುದು ಇಲ್ಲದಿದ್ದರೂ ಬಿಡಬಹುದು. ವೈಯಕ್ತಿಕ ಮಾಹಿತಿ ಕೊಡುವುದು, ಬಿಡುವುದು ಜನರ ತೀರ್ಮಾನ. ಎಲ್ಲ ಮಾಹಿತಿ ಕೊಟ್ಟರೆ ಸರ್ಕಾರದ ಸೌಲಭ್ಯಕ್ಕೆ ಕೊಕ್‌ ಬೀಳಬಹುದು.ಸಿದ್ದರಾಮಯ್ಯನವರದ್ದು ಜಾತಿ ಒಡೆಯುವ ಬ್ರಾಂಡ್‌. 15 ದಿನದಲ್ಲೇ ಸರ್ವೆ ಮಾಡಬೇಕು ಎನ್ನುವ ಆತುರ ಏಕೆ ? 15 ದಿನದಲ್ಲಿ ಸಿಎಂ ಬಿಟ್ಟೋಗುತ್ತಾರಾ? ತರಬೇತಿ ಇಲ್ಲದೇ ಸರ್ವೆಗೆ ಹೋಗುತ್ತಿದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡು ಬರಲು ಸರ್ವೆಗೆ ಹೋಗಬೇಕಾ ? ಎಂದು ಪ್ರಶ್ನಿಸಿದರು.

ಅಂತೂ ಇಂತೂ ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ಹೋಗುತ್ತಿರುವುದು ಸಂತೋಷ. ಆದರೆ ವೈಮಾನಿಕ ಸಮೀಕ್ಷೆ ಯಾಕೆ? ಯಾಕೆ ರಸ್ತೆ ಮೇಲೆ ಸಿಎಂ ಹೋಗುತ್ತಿಲ್ಲ? ಸಿಎಂ ಏನು ದೆಹಲಿಯಿಂದಲೋ ಮುಂಬೈಯಿಂದಲೋ ಬರುತ್ತಿದ್ದಾರಾ? ರಸ್ತೆಗಳಲ್ಲಿ ರಸ್ತೆಗುಂಡಿಗಳಿವೆ ಅದಕ್ಕೇ ಸಿಎಂ ರಸ್ತೆ ಮಾರ್ಗದಲ್ಲಿ ನೆರೆಪೀಡಿತ ಪ್ರದೇಶಗಳ ಭೇಟಿ ಮಾಡುತ್ತಿಲ್ಲ. ರಸ್ತೆ ಮಾರ್ಗದಲ್ಲಿ ಹೋದರೆ ಜನ ಘೇರಾವ್‌ ಹಾಕುತ್ತಾರೆ ಎಂದು ಭಯದಿಂದ ವೈಮಾನಿಕ ಸಮೀಕ್ಷೆ ಮಾಡುತ್ತಿದ್ದಾರೆ

ಸರ್ಕಾರ ನೆರೆ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಮಾಡಬೇಕಿತ್ತು. ಮಂತ್ರಿಗಳ, ಅಧಿಕಾರಿಗಳ ಒಂದು ತಂಡ ರಚಿಸಿ ಕಳಿಸಬೇಕಿತ್ತು. ಆದ್ರೆ ಇದುವರೆಗೆ ಒಬ್ಬೇಒಬ್ಬ ಮಂತ್ರಿ ನೆರೆ ಪ್ರದೇಶಗಳ ಕಡೆ ಸುಳಿದಿಲ್ಲ. ಇದು ಯಾವ ಸೀಮೆ ಸರ್ಕಾರ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ. ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಸಚಿವ ಸಂಪುಟ ಪುನಾರಚನೆ ಬಗ್ಗೆ ಸಚಿವ ಜಮೀರ್‌ ಅಹಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್‌, ಇದು ತಂತ್ರ ಇಲ್ಲದೇ ನಡೀತಿರುವ ಅತಂತ್ರ ಸರ್ಕಾರ. ಜಮೀರ್‌ ಹೇಳಿಕೆ ಅಕ್ಟೋಬರ್‌ ಕ್ರಾಂತಿ ಆಗುವುದರ ಸುಳಿವುಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ಅಕ್ಟೋಬರ್‌ ಕ್ರಾಂತಿ ಆಗುವುದು ಪಕ್ಕಾ. ಕ್ರಾಂತಿ ಬಗ್ಗೆ ಮಾತನಾಡಲು ಹೋಗುತ್ತಿದ್ದಾರೆ. ರಾಜಣ್ಣ ವಜಾ ಆದರು. ಒಟ್ಟಿನಲ್ಲಿ ಅಕ್ಟೋಬರ್‌ ಕ್ರಾಂತಿ ಆಗುವುದು ಖಚಿತ . ಅಕ್ಟೋಬರ್‌ ಕ್ರಾಂತಿ ಆಗಿ ಸರ್ಕಾರ ಬಿದ್ದು ಹೋದರೆ ನಾವು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್‌‍ ಸಚಿವರೇ ಹೇಳುತ್ತಿದ್ದಾರೆ. ಇದು ಅಸ್ಥಿರ ಸರ್ಕಾರ. ನಾವು ನಾಲ್ಕೈದು ತಿಂಗಳಿನಿಂದ ಅಕ್ಟೋಬರ್‌ ಕ್ರಾಂತಿ ಬಗ್ಗೆ ಹೇಳುತ್ತಿದ್ದೆವು. ಈಗ ಮಂತ್ರಿಯೇ ಕ್ಯಾಬಿನೆಟ್‌ ಪುನರ್‌ ರಚನೆ ಎಂದು ಹೇಳಿದ್ದಾರೆ. ಪುನರ್‌ ರಚನೆ ಅಂದರೆ ಮುಖ್ಯಮಂತ್ರಿಯೂ ಸೇರಿ ಬದಲಾಗುತ್ತಾರೆ, ಅಕ್ಟೋಬರ್‌ ಕ್ರಾಂತಿ ಎಂದ ಕಾಂಗ್ರೆಸ್‌‍ ನಾಯಕರು ಮನೆಗೆ ಹೋಗಿದ್ದಾರೆ. ಈಗ ಹೇಳುತ್ತಿರುವವರೂ ಮನೆಗೆ ಹೋಗುತ್ತಾರೆ ಎಂದರು.

RELATED ARTICLES

Latest News