ಮೈಸೂರು, ಅ. 1– ನಾಡಹಬ್ಬ ದಸರಾ ಮಹೋತ್ಸವದ ಅತ್ಯಂತ ಪ್ರಮುಖ ಆಕರ್ಷಣೆಯಾದ ಜಂಬುಸವಾರಿ ಮೆರವಣಿಗೆಗೆ ಅರಮನೆ ನಗರಿ ಸಜ್ಜಾಗಿದೆ.ನಾಳೆ ಮಧ್ಯಾಹ್ನ 1ರಿಂದ 1.18ರ ಒಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂದಿಧ್ವಜ ಪೂಜೆ ನೆರವೇರಿಸಲಿದ್ದಾರೆ.
ಮೆರವಣಿಗೆ ಸಾಗಿದ ನಂತರ ಸಂಜೆ 4.42 ರಿಂದ 5.06 ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹೊತ್ತ ಆನೆ ಅಭಿಮನ್ಯುವಿಗೆ ಸಿಎಂ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 60 ಸ್ತಬ್ಧ ಚಿತ್ರಗಳು ಸೇರಿದಂತೆ ನೂರಕ್ಕೂ ಹೆಚ್ಚು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.ಮೊದಲು ಮೆರವಣಿಗೆಯಲ್ಲಿ ನಂದಿಧ್ವಜ ಸಾಗಿದ ನಂತರ ನಿಶಾನೆ, ನೋಪತ್ ಆನೆಗಳು ಸಾಗಿ ಬರಲಿವೆ. ಇದರೊಂದಿಗೆ ಪೊಲೀಸ್ ಪಡೆ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಮಂಗಳ ವಾದ್ಯದೊಂದಿಗೆ ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಲಿದೆ.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ನಡುವೆ ಸ್ತಬ್ಧಚಿತ್ರಗಳು ಸಹ ಸಾಗಿ ಬರಲಿವೆ. ಜಂಬೂಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆ ಆವರಣದಲ್ಲಿ 45,000 ಹಾಸನ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್ ಟಿಕೆಟ್ ಪಡೆದವರಿಗೂ ಹಾಗೂ ಪಾಸ್ ಪಡೆದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮೈಸೂರು ಜಿಲ್ಲಾಡಳಿತ ಹಾಗೂ ನಗರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.ಈ ಬಾರಿ ಜಂಬುಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಹಳೆಯ ಹಾಗೂ ಶಿಥಿಲವಾದ ಕಟ್ಟಡಗಳು, ಮರಗಳ ಮೇಲೆ ಸಾರ್ವಜನಿಕರು ಏರಿ ವಿಜಯದಶಮಿ ಮೆರವಣಿಗೆ ವೀಕ್ಷಿಸುವುದನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
6384 ಸಿವಿಲ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 35 ಕೆಎಸ್‌ಆರ್‌ಪಿ ತುಕಡಿಗಳು, 15 ಸಿಎಆರ್ ಮತ್ತು ಡಿಆರ್ ತುಕಡಿಗಳು, 29 ಎಎಸ್‌ಸಿ, ಒಂದು ಗರುಡ ಫೋರ್ಸ್ ಹಾಗೂ 1500 ಹೋಂ ಗಾರ್ಡ್‌ಗಳನ್ನು ಕೂಡ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಇವರೊಂದಿಗೆ 35 ಡಿವೈಎಸ್‌ಪಿ, 140 ಇನ್‌್ಸಪೆಕ್ಟರ್‌ಗಳು ಸಹ ಭದ್ರತೆಯ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಇಲಾಖೆಯಿಂದ 220 ಸಿಸಿಟಿವಿ ಕ್ಯಾಮೆರಾಗಳನ್ನು ಜಂಬುಸವಾರಿ ಮಾರ್ಗದಾದ್ಯಂತ ಅಳವಡಿಸಲಾಗಿದೆ.