Friday, October 3, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನ : ಸಿಡಿಮದ್ದು ಸ್ಪೋಟದಲ್ಲಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

ಹಾಸನ : ಸಿಡಿಮದ್ದು ಸ್ಪೋಟದಲ್ಲಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಸಾವು

Hassan: Couple injured in blast dies

ಹಾಸನ,ಅ.1-ಹಳೇ ಆಲೂರು ಗ್ರಾಮದಲ್ಲಿ ಸಿಡಿಮದ್ದು ತಯಾರಿಸುವ ವೇಳೆ ಸ್ಪೋಟ ಸಂಭವಿಸಿ ಗಂಭೀರ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಿಸದೇ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುದರ್ಶನ್‌ ಆಚಾರ್‌ (32) ಮತ್ತು ಕಾವ್ಯ (27) ಮೃತಪಟ್ಟ ದಂಪತಿ. ಇವರ ಸಾವಿನಿಂದ 14 ತಿಂಗಳ ಮಗು ಪೋಷಕರನ್ನು ಕಳೆದುಕೊಂಡು ಅನಾಥವಾಗಿದೆ.

ಮೊನ್ನೆ ಸಂಜೆ ಸುದರ್ಶನ್‌ ಆಚಾರ್‌ ಅವರು ಸಿಡಿಮದ್ದು ತಯಾರಿಸುತ್ತಿದ್ದಾಗ ಏಕಾಏಕಿ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಸುದರ್ಶನ್‌ ಅವರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿತ್ತು. ಪತ್ನಿ ಕಾವ್ಯ ಅವರ ಎರಡು ಕಾಲುಗಳು ಚಿದ್ರಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು.

ಅಲ್ಲದೇ ಸ್ಪೋಟದ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಸ್ಪೋಟದ ಶಬ್ದ ಕೇಳಿ ಅಕ್ಕಪಕ್ಕದವರು ಇವರ ಮನೆ ಬಳಿ ಬಂದು ನೋಡಿದಾಗ ದಂಪತಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದುದ್ದು ಕಂಡು ಬಂದಿದೆ.

ತಕ್ಷಣ ಗಾಯಾಳು ದಂಪತಿಯನ್ನು ಹಿಮ್ಸೌ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ ದಂಪತಿ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ಮೃತಪಟ್ಟಿದ್ದು, ಈ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಅಂದು ಸ್ಟೋಟದ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಮನೆಯಲ್ಲಿದ್ದ ಎರಡು ಸಿಲಿಂಡರ್‌ ಹಾಗೂ ಗೀಸರ್‌ ಹಾಗೇ ಇದ್ದದ್ದು ಕಂಡುಬಂದಿದೆ. ಆದರೆ ಸ್ಪೋಟಕ್ಕೆ ಕಾರಣವೇನು ಎಂಬುದು ನಿಗೂಢವಾಗಿಯೇ ಉಳಿದಿದೆ.

ಇದೀಗ ಪೊಲೀಸರ ತನಿಖೆಯಿಂದ ಸಿಡಿಮದ್ದು ತಯಾರಿಕೆಗೆ ಬಳಸಿದ್ದ ಮದ್ದು ಸ್ಪೋಟಗೊಂಡು ಈ ದುರಂತ ನಡೆದಿರುವುದು ಗೊತ್ತಾಗಿದೆ. ಸುದರ್ಶನ್‌ ಅವರು ಜಾತ್ರೆ ಹಾಗೂ ಊರ ಹಬ್ಬಗಳಿಗಾಗಿ ಮನೆಯಲ್ಲಿ ಸಿಡಿಮದ್ದನ್ನು ತಯಾರಿಸುತ್ತಿದ್ದರು. ಅದಕ್ಕಾಗಿ ಮದ್ದನ್ನು ಸಂಗ್ರಹಿಸಿದ್ದರು. ಆಕಸಿಕವಾಗಿ ಬೆಂಕಿ ತಗುಲಿ ಸ್ಪೋಟಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಇನ್ನಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ಸುದರ್ಶನ್‌ ಅವರ ಮನೆಯ ಸುತ್ತ ಆಲೂರು ಠಾಣೆ ಪೊಲೀಸರು ಹಾಗೂ ಮಂಗಳೂರಿನಿಂದ ಸ್ಥಳ ಪರಿಶೀಲನೆಗೆ ಬಾಂಬ್‌ ನಿಷ್ಕ್ರಿಯ ದಳ ಆಗಮಿಸಿದ್ದು, ಸ್ಥಳದಲ್ಲಿ ದೊರೆತ ಕೆಲವು ವಸ್ತುಗಳನ್ನು ಸಂಗ್ರಹಿಸಿ ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದ್ದು ವರದಿ ಬಂದ ನಂತರವಷ್ಟೇ ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬರಲಿದೆ.

ಅದೃಷ್ಟವಶಾತ್‌ ಮನೆಯಲ್ಲಿದ್ದ ಸುದರ್ಶನ್‌ ಅವರ 14 ತಿಂಗಳ ಮಗು ಸೇರಿ ಇತರ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಆಲೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News