ಜಾನ್ಪುರ, ಅ.1- ವಯಸ್ಸಾದ ಮೇಲೆ ಶಿವ ಅಂತ ಇರಬೇಕು. ಮಾಡಬಾರದು ಮಾಡಲು ಹೋದರೆ ಆಗಬಾರದೇ ಅಗುವುದು ಎನ್ನುವುದಕ್ಕೆ ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆಯಾಗಿ ಅದಕ್ಕಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಕುಚ್‌ಮುಚ್ ಗ್ರಾಮದ ಮುದುಕ ಮದುವೆಯಾದ ಮರುದಿನವೇ ಸಾವನ್ನಪ್ಪಿದ್ದಾರೆ. ಈ ಕಿಲಾಡಿ ಮುದುಕ ತನಗಿಂತ 30 ವರ್ಷಕ್ಕೂ ಕಡಿಮೆ ವಯಸ್ಸಿನ ಮಹಿಳೆಯನ್ನು ಎರಡನೆ ಮದುವೆಯಾಗಿದ್ದರು.
ಈ ತಾತ ಒಂದು ವರ್ಷದ ಹಿಂದೆ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು. ಅಂದಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಮಕ್ಕಳಿಲ್ಲದ ಕಾರಣ, ಅವರು ಕೃಷಿಯ ಮೂಲಕ ತನ್ನನ್ನು ತಾನು ಪೋಷಿಸಿಕೊಂಡಿದ್ದರು.
ಹೀಗೆ ಹಲವು ವರ್ಷ ಕಳೆದ ಮುದುಕನಿಗೆ ಇತ್ತಿಚೆಗೆ ಇನ್ನೊಂದು ಮದುವೆಯಾಗಿ ಆಸೆ ಹುಟ್ಟಿಕೊಂಡಿತ್ತು. ಹೀಗಾಗಿ ಅವರು 35 ವರ್ಷದ ಮಹಿಳೆಯನ್ನು ವಿವಾಹವಾಗಲು ನಿರ್ಧರಿಸಿದರು.
ಅವರ ಕುಟುಂಬದವರು ಮರುಮದುವೆಯಾಗದಂತೆ ಸಲಹೆ ನೀಡಿದ್ದರು, ಆದರೆ ತಾತ ಕ್ಯಾರೆ ಎನ್ನದೆ ಅವರು ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಅವರನ್ನು ವಿವಾಹವಾದರು. ದಂಪತಿ ನ್ಯಾಯಾಲಯದಲ್ಲಿ ಮದುವೆಯನ್ನು ನೋಂದಾಯಿಸಿಕೊಂಡರು ಮತ್ತು ನಂತರ ಸ್ಥಳೀಯ ದೇವಸ್ಥಾನಕ್ಕೆ ಹೋಗಿ ವಿವಾಹವಾಗಿದ್ದರು.
ಮದುವೆಯ ಮರುದಿನವೇ ಮುದುಕ ಸಾವನ್ನಪ್ಪಿದ್ದಾರೆ. ಮದುವೆಯಾದ ಮರುದಿನದ ಬೆಳಗ್ಗೆ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಈ ಹಠಾತ್ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವು ನಿವಾಸಿಗಳು ಇದನ್ನು ಸಹಜ ಸಾವೆಂದು ಕರೆದರೆ, ಇನ್ನು ಕೆಲವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಿದ್ದಾರೆ.