Friday, October 3, 2025
Homeರಾಜ್ಯಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

Ayudha Puja celebrations at Mysore Palace

ಮೈಸೂರು,ಅ.1-ಎಲ್ಲೆಡೆ ಇಂದು ಆಯುಧ ಪೂಜೆ ಸಂಭ್ರಮ. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಕಳೆಗಟ್ಟಿದ್ದು, ಮಹಾರಾಜ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪೂಜಾ ಕಾರ್ಯ ನೆರವೇರಿಸಿದರು.ಇಂದು ಬೆಳಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿ ಬಳಿಕ 7.55 ಕ್ಕೆ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಯಿತು.

ಈ ಆಯುಧಗಳನ್ನು ಶುಚಿಗೊಳಿಸಿ ವಾಪಸ್‌‍ ಅರಮನೆಗೆ ರವಾನಿಸಲಾಗುತ್ತದೆ. ಅರಮನೆಯ ಆನೆ ಬಾಗಿಲು ಮೂಲಕ ಈ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ಕೊಂಡೊಯ್ದು ಜೋಡನೆ ಮಾಡಿ ಸಿಂಹಾಸನಕ್ಕೆ ಜೋಡಿಸಿರುವ ಸಿಂಹಕ್ಕೆ ಪೂಜೆ ಮಾಡಲಾಯಿತು.ಆ ನಂತರ ರಾಜ ಪುರೋಹಿತರ ಮಾರ್ಗದರ್ಶನದಂತೆ ಯದುವೀರ ಒಡೆಯರ್‌ ಅವರು ಆಯುಧ ಪೂಜೆ ನೆರವೇರಿಸಿದರು.

ಕರಿಕಲ್ಲು ತೊಟ್ಟಿಯಲ್ಲಿ ಯದುವೀರ್‌ ಒಡೆಯರ್‌ ಅವರು ಪೂಜೆ ಸಲ್ಲಿಸಿದರು.ಇದೇ ವೇಳೆ ಪಟ್ಟದ ಆನೆ,ಕುದುರೆ,ಒಂಟೆ,ಹಸು ಹಾಗೂ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ನೆರವೇರಿಸಲಾಯಿತು.

ಸಂಜೆ ಖಾಸಗಿ ದರ್ಬಾರ್‌ ನಡೆಯಲಿದ್ದು,ಬೆಳ್ಳಿದ್ವಾರದಿಂದ ರಾಜರು ಪ್ರವೇಶಿಸುವ ಸಂದರ್ಭದಲ್ಲಿ ಹಸ್ತಲಾಘವದ ಮೂಲಕ ಸಿಂಹಾಸನದ ಏಳು ಮೆಟ್ಟಿಲು ಏರಿ ದರ್ಬಾರ್‌ ಮಾಡುತ್ತಾರೆ.
ದರ್ಬಾರ್‌ ಬಳಿಕ ಸಂಸ್ಥಾನ ಗೀತೆಯನ್ನು ಪೊಲೀಸ್‌‍ ಬ್ಯಾಂಡ್‌ನಲ್ಲಿ ನುಡಿಸಲಾಗುತ್ತದೆ. ಸಭಾ ಸದಸ್ಯರು ರಾಜರಿಗೆ ಗೌರವ ಮತ್ತು ರಕ್ಷೆ ನೀಡುತ್ತಾರೆ. ಆ ವೇಳೆ ಒಡೆಯರ್‌ ಅವರಿಗೆ ಪರಾಕ್‌ಗಳನ್ನು ಕೂಗಲಾಗುತ್ತದೆ. ರಾಣಿಯವರು ಬಂದು ರಾಜರಿಗೆ ನಮಸ್ಕರಿಸಿದ ಬಳಿಕ ದರ್ಬಾರ್‌ ಮುಗಿಸಿ ಪೂಜೆ ಮಾಡಲಾಗುತ್ತದೆ.

ಬಳಿಕ ಕಂಕಣ ವಿಸರ್ಜನೆ ಮಾಡಿದಾಗ ನವರಾತ್ರಿ ಪೂಜೆ ಸಂಪನ್ನವಾಗುತ್ತದೆ. ಆ ಸಂದರ್ಭದಲ್ಲಿ ರಾಣಿಯವರಿಂದ ಮಹಾರಾಜರ ಪಾದ ಪೂಜೆ ನೆರವೇರಿಸಿ, ಆಯುಧ ಪೂಜೆ ದಿನದ ಎಲ್ಲಾ ಪೂಜಾ ಕೈಂಕರ್ಯಗಳು ಮುಕ್ತಾಯವಾಗುತ್ತವೆ.

RELATED ARTICLES

Latest News