ಬೆಂಗಳೂರು, ಅ.1- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ನಿಯಮಿತ ಆರೋಗ್ಯ ತಪಾಸಣೆಗಾಗಿ ನಿನ್ನೆ ಎಂಎಸ್ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದರು. ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥತೆ ಕಾಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನುರಿತ ವೈದ್ಯರ ತಂಡ, ಖರ್ಗೆ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತೆ್ಸ ನೀಡುತ್ತಿದೆ.
ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಹಲವಾರು ಮಂದಿ ಆಸ್ಪತ್ರೆಗೆ ತೆರಳಿ ಖರ್ಗೆ ಅವರ ಆರೋಗ್ಯ ವಿಚಾರಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್,ಮಾಜಿ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರರು ಜೊತೆಯಲ್ಲಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಉತ್ತಮವಾಗಿದೆ. ಎಲ್ಲರ ಜೊತೆ ಆರಾಮವಾಗಿ ಮಾತನಾಡಿಕೊಂಡಿದ್ದಾರೆ. ನಿಯಮಿತ ತಪಾಸಣೆಗೆ ಬಂದಿದ್ದ ಅವರು ಚಿಕಿತ್ಸೆಗೆ ದಾಖಲಾಗಿದ್ದರು. ನಾಳೆ ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ ಎಂದು ಅವರು ಹೇಳಿದರು.