ಬೆಂಗಳೂರು, ಅ.3- ಎನ್ಡಿಎ ಮೈತ್ರಿಕೂಟದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಹಂತದ ಚುನಾವಣೆಗಳಲ್ಲೂ ಎರಡೂ ಪಕ್ಷಗಳ ಮೈತ್ರಿ ಮುಂದುವರೆಯುತ್ತದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಮುಂದಿನ ವಿಧಾನಸಭೆ ಚುನಾವಣೆಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಒಡನಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ಬಗ್ಗೆ ಪ್ರಧಾನಿಯವರು ಒಂದೇ ಒಂದು ಮಾತನ್ನೂ ಲಘುವಾಗಿ ಆಡಿಲ್ಲ. ಎರಡೂ ಪಕ್ಷಗಳ ನಡುವಿನ ಸಂಬಂಧ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಡದಿ ಟೌನ್ಶಿಪ್ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ವಿಚಾರದಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ನಮದು ಸಣ್ಣ ರಾಜಕೀಯ ಪಕ್ಷವಾಗಿದ್ದು, ಅದನ್ನು ಉಳಿಸಿ-ಬೆಳೆಸಲು ಶಕ್ತಿಮೀರಿ ಕೆಲಸ ಮಾಡುತ್ತೇವೆ. ಚುನಾವಣೆ ಬಂದಾಗ ಜನರು ತೀರ್ಪು ನೀಡುತ್ತಾರೆ. ಅಲ್ಲಿಯವರೆಗೂ ಕಾಯಲೇಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಉಸ್ತುವಾರಿ ಸಚಿವರುಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಬೇಕು. ಇನ್ನೂ ಮೂರ್ನಾಲ್ಕು ದಿನಗಳ ನಂತರ ನಾನು ಕೂಡ ಗುಲ್ಬರ್ಗಾಕ್ಕೆ ಭೇಟಿ ನೀಡಿ ಅಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳ ವಾಸ್ತವಾಂಶ ಹಾಗೂ ಸಂಕಷ್ಟದಲ್ಲಿರುವ ಜನರ ಅಭಿಪ್ರಾಯ ಪಡೆದು ನಂತರ ಪ್ರಧಾನಿಯವರಿಗೆ ಪತ್ರ ಬರೆಯುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರಾಜ್ಯ ಸರ್ಕಾರ ಯಾವ ರೀತಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಸಕಾರಾತಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಲವಾರು ಹಳ್ಳಿಗಳು, ರಸ್ತೆ, ಸೇತುವೆಗಳು ನಾಶವಾಗಿವೆ. ಜೀವ ಹಾಗೂ ಬೆಳೆಹಾನಿಯಾಗಿದೆ. ಜಾನುವಾರುಗಳು ಮೃತಪಟ್ಟಿವೆ ಎಂದರು. ಇದೇ ಮೊದಲ ಬಾರಿಗೆ ಭೀಮಾ ನದಿಯಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅವರಲ್ಲೇ ಗೊಂದಲವಿದೆ. ಇಂತಹ ಪರಿಸ್ಥಿತಿ ಉಂಟಾದಾಗ ರಾಜ್ಯ ಸರ್ಕಾರ ಶಕ್ತಿ ಮೀರಿ ಜನರಿಗೆ ಸಹಾಯ ಮಾಡುವ ಜವಾಬ್ದಾರಿ ಇದೆ ಎಂದು ಹೇಳಿದರು. ಮಹಿಳಾ ಸಮಾವೇಶ: ಅಕ್ಟೋಬರ್ 12ರಂದು ಮಹಿಳಾ ಸಮಾವೇಶ ನಡೆಸಿ ನಮ ಶಕ್ತಿ ಪ್ರದರ್ಶನ ಮಾಡಲಾಗುವುದು. ಸಾಧ್ಯವಾದರೆ ಅರಮನೆ ಮೈದಾನದಲ್ಲೇ ಈ ಸಮಾವೇಶ ನಡೆಸಲಾಗುವುದು. ಬೆಂಗಳೂರು ನಗರ ಅಧ್ಯಕ್ಷ ಎಚ್.ಎಂ.ರಮೇಶ್ಗೌಡ ಅವರು ಜಿಬಿಎ ಚುನಾವಣೆಯಲ್ಲಿ 40 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಜಿಬಿಎ ಮಾತ್ರವಲ್ಲ, ಜಿಪಂ, ತಾಪಂ ಚುನಾವಣೆಯಲ್ಲೂ ನಮ ಮಹಿಳಾ ಶಕ್ತಿ ಪ್ರದರ್ಶನವಾಗಬೇಕು. ಹಾಗಾಗಿ ಒಂದು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು 60 ರಿಂದ 65 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಅವರು ಸೋತ ನಂತರ ತಮ ಅನುಭವವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ನನಗೆ ಮಂಡಿನೋವು ಹೊರತುಪಡಿಸಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್.ಜವರಾಯಿಗೌಡ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಮಾಜಿ ಶಾಸಕ ಎಚ್.ನಿಂಗಪ್ಪ, ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ರಮೇಶ್ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಮತ್ತಿತರರಿದ್ದರು.