Friday, October 3, 2025
Homeರಾಜ್ಯಕಾಂಗ್ರೆಸ್‌ನಲ್ಲಿ ಮತ್ತೆ ಭುಗಿಲೆದ್ದ ಸಿಎಂ ಕುರ್ಚಿ ಕದನ

ಕಾಂಗ್ರೆಸ್‌ನಲ್ಲಿ ಮತ್ತೆ ಭುಗಿಲೆದ್ದ ಸಿಎಂ ಕುರ್ಚಿ ಕದನ

ಬೆಂಗಳೂರು, ಅ.3- ಸೆಪ್ಟಂಬರ್‌ ಮುಗಿದರೂ ಕ್ರಾಂತಿಯ ಸುಳಿವೇ ಇಲ್ಲದಂತೆ ಎಲ್ಲವೂ ತಣ್ಣಗಿ ರುವುದು, ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಿರುವುದು, ಮುಂದಿನ ಎರಡು ತಿಂಗಳಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದವರಿಗೆ ನೋಟಿಸ್‌‍ ನೀಡುತ್ತಿರುವುದು, ಉಪಮುಖ್ಯ ಮಂತ್ರಿಯವರ ಮೌನ, ಎಲ್ಲವೂ ಕಾಂಗ್ರೆಸ್‌‍ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಸನ್ನಿವೇಶವನ್ನು ಸೃಷ್ಟಿಸಿದೆ.

ಕಾಂಗ್ರೆಸ್‌‍ ನಾಯಕ, ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಮುಂದಿನ ಎರಡು ತಿಂಗಳಿನಲ್ಲಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ಕುಣಿಗಲ್‌ ಕ್ಷೇತ್ರದ ಶಾಸಕ ಹೆಚ್‌.ಡಿ.ರಂಗನಾಥ್‌ ಡಿ.ಕೆ.ಶಿವ ಕುಮಾರ್‌ಗೆ ಬಹುಪರಾಕ್‌ ಹಾಕಿದ್ದರು. ಈ ಇಬ್ಬರಿಗೂ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌‍ ನೀಡಿ ಒಂದು ವಾರದಲ್ಲಿ ಉತ್ತರ ನೀಡುವಂತೆ ತಾಕೀತು ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಯಾರೂ ಕೂಡ ಸ್ಪಷ್ಟವಾಗಿ ಹೀಗೆಯೇ ನಡೆಯುತ್ತದೆ ಎಂದು ಹೇಳುತ್ತಿಲ್ಲ.

ಮುಂದಿನ ದಸರಾವನ್ನು ಬಹುಶಃ ನಾನೇ ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೊತೆಯಲ್ಲೇ ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ ಎಂದು ಸೇರಿಸಿದ್ದಾರೆ.
ಡಿ.ಕೆ.ಶಿವಕುಮಾರ್‌ ತಮ ಹೇಳಿಕೆಯಲ್ಲಿ, ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಅಧಿಕಾರ ಹಂಚಿಕೆಯ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಯಾರಿಗೂ ಈ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಸುಮನಾಗದ ಅವರು ತಮ ಪರವಾಗಿ ಮಾತನಾಡಿರುವವರಿಗೆ ನೋಟಿಸ್‌‍ ನೀಡಲು ನಾನೇ ಹೇಳಿದ್ದೇನೆ ಎಂದಿದ್ದಾರೆ. ಹೈಕಮಾಂಡ್‌ ತೀರ್ಮಾನಕ್ಕೆ ನಾವು ಬದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅಷ್ಟೇ. ಅದಕ್ಕೆ ನಾವೇಲ್ಲಾ ಬದ್ಧ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಯಾವುದೇ ಕಾರ್ಯಕ್ರಮ ಅಥವಾ ವೇದಿಕೆಗಳಾದರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಇಬ್ಬರ ನಡುವೆ ಮೊದಲಿದ್ದ ಅನ್ಯೋನ್ಯತೆ ಕಂಡು ಬರುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷರಾಗಿದ್ದರೂ ಅವರನ್ನು ಸಂಪುಟದ ಸಚಿವರಂತೆ ಸಿದ್ದರಾಮಯ್ಯ ಪರಿಗಣಿಸುತ್ತಿರುವುದು ಎದ್ದು ಕಾಣುತ್ತಿದೆ.

ನಿನ್ನೆ ದಸರಾ ಉದ್ಘಾಟನೆ ಸಂದರ್ಭದಲ್ಲಿ ನಡೆದ ತೆರೆದ ಜೀಪಿನ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಮೊದಲ ಸಾಲಿನಲ್ಲಿ ನಿಂತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ ಸಿದ್ದರಾಮಯ್ಯ ನಂತರ ನಿಂತು ಕೈ ಬೀಸುತ್ತಿರುವುದು ಕಂಡು ಬಂತು. ಡಿ.ಕೆ.ಶಿವಕುಮಾರ್‌ ಅದಕ್ಕಿಂತಲೂ ಹಿಂದಿನ ಸಾಲಿನಲ್ಲಿ ನಿಂತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಡಿ.ಕೆ.ಶಿವಕುಮಾರ್‌ ಅವರನ್ನು ಮುಂದೆ ಬಿಟ್ಟು ಮಹದೇವಪ್ಪ ಹಿಂದೆ ಸರಿದರು.
ಹಲವು ವೇದಿಕೆಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ ಡಿ.ಕೆ.ಶಿವಕುಮಾರ್‌ ಅವರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸುವುದು, ಬಲವಂತವಾಗಿ ಡಿ.ಕೆ.ಶಿವಕುಮಾರ್‌ ತಮ ಪ್ರಾಧಾನ್ಯತೆಯನ್ನು ಪಡೆದುಕೊಳ್ಳುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ರೀತಿಯ ಅನಾಧಾರಣೆಯನ್ನೂ ಸಹಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್‌ ತಮ ಪರವಾಗಿ ಹೇಳಿಕೆ ನೀಡುವವರಿಗೆ ನೋಟಿಸ್‌‍ ಕೊಟ್ಟು ಬಾಯಿ ಮುಚ್ಚಿಸುತ್ತಿರುವುದೇಕೆ ಎಂಬ ಅನುಮಾನಗಳು ಹಾಗೂ ಕುತೂಲಹ ಹೆಚ್ಚಿದೆ.

ವಿಧಾನಸಭೆ ಚುನಾವಣೆ ಬಳಿಕ ನಡೆದ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ಹಿನ್ನೆಡೆ ಅನುಭವಿಸಿದ್ದ ಡಿ.ಕೆ.ಶಿವಕುಮಾರ್‌ ಮೊದಲ ಅವಧಿಗೆ ಮುಖ್ಯಮಂತ್ರಿ ಹುದ್ದೆ ಸಿಗದೇ ನಿರಾಶರಾಗಿದ್ದಾರೆ. ಹಾಲುಮತದವರಿಂದ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೋಡಿಹಳ್ಳಿ ಶ್ರೀಗಳ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಸದ್ಯದ ವಾತಾವರಣದಲ್ಲಿ ಸಿದ್ದರಾಮಯ್ಯ ತಾವಾಗಿಯೇ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೈಕಮಾಂಡ್‌ ಸ್ಥಾನ ಪಲ್ಲಟ ಮಾಡುವ ಸೂಚನೆಗಳಂತೂ ಇಲ್ಲ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌‍ನಲ್ಲಿ ಒಂದು ಬಣ ಒಳಗೊಳಗೆ ಕೈ ಹಿಸುಕಿಕೊಳ್ಳುತ್ತಿದೆ. ಮತ್ತೊಂದು ಬಣ ಸಿದ್ದರಾಮಯ್ಯ ಮುಂದುವರೆಯಬೇಕು ಎಂಬ ಭಾವನೆಗೆ ಸೀಮಿತವಾಗಿದೆ. ನಿಷ್ಟಾವಂತ ಹಾಗೂ ಮೂಲ ಕಾಂಗ್ರೆಸ್ಸಿಗರಲ್ಲಿ ಬಹುತೇಕರು ಸಿದ್ದರಾಮಯ್ಯ ಕ್ಯಾಂಪ್‌ಗೆ ಜಂಪ್‌ ಆಗಿದ್ದಾರೆ. ಡಿ.ಕೆ.ಶಿವಕುಮಾರ್‌ ಜಂಬದ ನಾಯಕ ಎಂಬ ತೆಗಳಿಕೆಗೆ ಗುರಿಯಾಗಿರುವುದು ಇದಕ್ಕೆ ಮೂಲ ಕಾರಣವಾಗಿದೆ. ಎಷ್ಟೇ ದೊಡ್ಡ ನಾಯಕರಾಗಿದ್ದರೂ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ಮುಖಕೊಟ್ಟು ಮಾತನಾಡುವುದಿಲ್ಲ. ಎಲ್ಲಿಯೋ ನೋಡುತ್ತಾ ಅನಾಧಾರಣೆಯ ಪ್ರತಿಕ್ರಿಯೆ ನೀಡುತ್ತಾರೆ. ಸಿದ್ದರಾಮಯ್ಯ ಹಾಗಲ್ಲ ಹೆಗಲ ಮೇಲೆ ಕೈ ಹಾಕಿ ಉಭಯ ಕುಶಲೋಪರಿ ವಿಚಾರಿಸುತ್ತಾರೆ. ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿ ಎಂಬ ಭಾವನೆ ಬಹಳಷ್ಟು ನಾಯಕರಲ್ಲಿದೆ. ರಾಜಕೀಯವಾಗಿ ಇಂತಹ ಸಣ್ಣ ವಿಚಾರಗಳು ದೊಡ್ಡ ಪರಿಣಾಮ ಬೀರಿದ ಉದಾಹರಣೆಗಳಿವೆ.

ನಾನು ಮುಖ್ಯಮಂತ್ರಿಯಾಗುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾವ ಶಾಸಕರ ಬೆಂಬಲವೂ ನನಗೆ ಅಗತ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಈಗಾಗಲೇ ಹೇಳಿಯೂ ಆಗಿದೆ. ಹಳೆಯ ಮೈಸೂರು ಭಾಗದಲ್ಲಿ ಒಂದಿಷ್ಟು ಶಾಸಕರು ಡಿ.ಕೆ.ಶಿವಕುಮಾರ್‌ ಪರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುತ್ತಿದ್ದ ಕೆ.ಎನ್‌.ರಾಜಣ್ಣರನ್ನು ಸಂಪುಟದಿಂದ ಉಚ್ಛಾಟನೆ ಮಾಡಿದ ಬಳಿಕ ಒಂದಿಷ್ಟು ಮಂದಿಗೆ ರಾಜಕೀಯವಾಗಿ ಮಾತನಾಡಲು ಧೈರ್ಯ ಸಾಲದೇ ಒಳಗೊಳಗೆ ಅಳುಕಿದೆ.

ಅಧಿಕಾರ ಇರುವ ಕಾರಣಕ್ಕೆ ಸಿದ್ದರಾಮಯ್ಯ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ಜನ ಬೆಂಬಲ ಅಧಿಕಾರಸ್ಥರ ಜೊತೆಗಿರುವುದು ಸಾಮಾನ್ಯ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಮರಳಿ ಅಧಿಕಾರಕ್ಕೆ ಬರಲಿದೆ. ಇಲ್ಲವಾದರೆ 2018ರ ಫಲಿತಾಂಶವೇ ಮರುಕಳಿಸಲಿದೆ ಎಂದು ಹಲವು ಮಂದಿ ವ್ಯಾಖ್ಯಾನಿಸುತ್ತಿದ್ದಾರೆ. ವಾದ ವಿವಾದಗಳು ಏನೇ ಇದ್ದರೂ ಸದ್ಯಕ್ಕೆ ಸೆಪ್ಟಂಬರ್‌ ಮುಗಿದಿದೆ. ಮುಂದೆ ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ, ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂದು ಕೆಲವರು ಹೇಳಿಕೊಂಡು ತಿರುಗುತ್ತಿದ್ದಾರೆ. ಬಾಯಿ ಬಿಟ್ಟವರಿಗೆ ನೋಟಿಸ್‌‍ ನೀಡಿ, ಬಾಯಿ ಮುಚ್ಚಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಇಕ್ಕಮತ್‌ ಅರ್ಥವಾಗದೆ ವಿರೋಧಿ ಬಣ ಗೊಂದಲಕ್ಕೀಡಾಗಿದೆ. ಕಾಂಗ್ರೆಸ್‌‍ ನಲ್ಲಿ ಎಲ್ಲವೂ ಸರಿ ಇದೆ, ಆದರೆ ಏನೋ ಸರಿ ಇಲ್ಲ ಎಂಬ ವಾತಾವರಣವಂತೂ ಮನೆ ಮಾಡಿದೆ. ಬೂದಿ ಮುಚ್ಚಿದ ಕೆಂಡಕ್ಕೆ ಯಾರು ಗಾಳಿ ಹಾಕುತ್ತಾರೋ ಅದು ಯಾವಾಗ ಜ್ವಾಲಾಗ್ನಿಯಾಗಲಿದೆಯೋ ಕಾದು ನೋಡಬೇಕಿದೆ.

RELATED ARTICLES

Latest News