ನವದೆಹಲಿ, ಅ.4- ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ ಎಂಬ ಪರಿಸ್ಥಿತಿಯ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರ ಕಾರ್ಯವೈಖರಿಯ ಗುಣಗಾನ ಮಾಡಿರುವುದು ಅಚ್ಚರಿ ಮೂಡಿಸಿದೆ.
ಇಸ್ರೇಲ್-ಗಾಜಾ ಸಂಘರ್ಷ ಕೊನೆಗೊಳಿಸಿ ಶಾಂತಿ ಸ್ಥಾಪಿಸಲು ಟ್ರಂಪ್ ಮಾಡಿದ ಪ್ರಯತ್ನ, ವಿಶೇಷವಾಗಿ ಒತ್ತೆಯಾಳುಗಳ ಬಿಡುಗಡೆ ಒಪ್ಪಂದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಚಾರದಲ್ಲಿ ಟ್ರಂಪ್ ನಾಯಕತ್ವವನ್ನು ಸ್ವಾಗತಿಸಿರುವ ಮೋದಿ, ಶಾಶ್ವತ ಶಾಂತಿಗಾಗಿ ಭಾರತದ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ತೆರಿಗೆ ಸಮರ ಹಾಗೂ ನಂತರದ ಬೆಳವಣಿಗೆಗಳಿಂದ ಭಾರತ-ಅಮೆರಿಕ ನಡುವಣ ಸಂಬಂಧ ಹದಗೆಡುತ್ತಲೇ ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್್ಡ ಟ್ರಂಪ್ ಅವರನ್ನು ಶ್ಲಾಘಿಸಿದ್ದಾರೆ.
ಇಸ್ರೇಲ್-ಗಾಜಾ ನಡುವಣ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಈ ವಿಚಾರದಲ್ಲಿ ಟ್ರಂಪ್ ನಾಯಕತ್ವವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಗಾಜಾದಲ್ಲಿ ಶಾಂತಿ ಸ್ಥಾಪನೆ ಕಾರ್ಯದಲ್ಲಿ ನಿರ್ಣಾಯಕ ಪ್ರಗತಿ ಸಾಧಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗಾಜಾದಲ್ಲಿ ಶಾಂತಿ ಸ್ಥಾಪನೆಯ ಪ್ರಯತ್ನಗಳಲ್ಲಿ ನಿರ್ಣಾಯಕ ಪ್ರಗತಿಯ ಮಧ್ಯೆ, ನಾವು ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸುಳಿವು ಒಂದು ಪ್ರಮುಖ ಹೆಜ್ಜೆಯಾಗಿದೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿನ ಎಲ್ಲಾ ಪ್ರಯತ್ನಗಳನ್ನು ಬಲವಾಗಿ ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ ಎಂದು ಮೋದಿ ಎಕ್್ಸ ಮಾಡಿದ್ದಾರೆ.
ಗಾಜಾದಲ್ಲಿ ಕದನ ವಿರಾಮಕ್ಕಾಗಿ 20 ಅಂಶಗಳ ಶಾಂತಿ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿದ್ಧಪಡಿಸಿದ್ದರು. ಇದನ್ನು ಇಸ್ರೇಲ್ ಅಂಗೀಕರಿಸಿತ್ತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಗಾಜಾದ ಅಧಿಕಾರವನ್ನು ಇತರ ಪ್ಯಾಲೆಸ್ತೀನಿಯನ್ನರಿಗೆ ಹಸ್ತಾಂತರಿಸಲು ಸಹ ಹಮಾಸ್ ಒಪ್ಪಿಕೊಂಡಿದೆ ಎನ್ನಲಾಗಿದೆ. ಆದಾಗ್ಯೂ, ಶಾಂತಿ ಪ್ರಸ್ತಾವನೆಯ ಇತರ ಹಲವು ಅಂಶಗಳ ಬಗ್ಗೆ ಸಮಾಲೋಚನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಮಾಸ್ ಹೇಳಿದೆ.
ಶಾಂತಿ ಪ್ರಸ್ತಾವನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಟ್ರಂಪ್ ಭಾನುವಾರ ಸಂಜೆ 6 ಗಂಟೆಯವರೆಗೆ ಹಮಾಸ್ಗೆ ಗಡುವು ನೀಡಿದ್ದಾರೆ. ಶಾಂತಿ ಪ್ರಸ್ತಾವನೆಯನ್ನು ಹಮಾಸ್ ಒಪ್ಪದಿದ್ದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ಟ್ರಂಪ್ ಎಚ್ಚರಿಕೆ ನೀಡಿದ ನಂತರ, ಅಕ್ಟೋಬರ್ ರಂದು ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ. ಹಲವು ಅಂಶಗಳು ಇನ್ನೂ ನಿರ್ಧಾರವಾಗಬೇಕಿದ್ದರೂ, ಒತ್ತೆಯಾಳುಗಳ ಬಿಡುಗಡೆಯು ಗಾಜಾಗೆ ಶಾಂತಿ ತರುವಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಹಮಾಸ್ ಪ್ರಸ್ತುತ 48 ಇಸ್ರೇಲಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ, ಅವರಲ್ಲಿ ಸರಿಸುಮಾರು 20 ಜನರು ಸಾವನ್ನಪ್ಪಿದ್ದಾರೆ.
ಒತ್ತೆಯಾಳುಗಳನ್ನು 72 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಹಮಾಸ್ ಹೇಳಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಯಾಗಿ, ಗಾಜಾ ಮೇಲಿನ ದಾಳಿಗಳನ್ನು ನಿಲ್ಲಿಸಲು ಇಸ್ರೇಲ್ ಒಪ್ಪಿಕೊಂಡಿದೆ. ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದು ಸಹ ಶಾಂತಿ ಒಪ್ಪಂದದಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.