ಬೆಂಗಳೂರು,ಅ.4-ಐ ಲವ್ ಮಹಮದ್ ಬ್ಯಾನರ್ ಹಾವಳಿ ಜಿಲ್ಲೆಗಳಿಂದ ಜಿಲ್ಲೆಗೆ ಹಬ್ಬುತಿದ್ದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬ್ಯಾನರ್ ಹಾವಳಿ ಕಾಣಿಸಿಕೊಂಡಿದ್ದು ಇದೀಗ ಬೆಳಗಾವಿ, ಕಲ್ಬುರ್ಗಿ ಜಿಲ್ಲೆಗಳಿಗೂ ಆವರಿಸಿದೆ.
ದಾವಣಗೆರೆ: ಕೆಲವು ದಿನಗಳ ಹಿಂದೆಯಷ್ಟೆ ದಾವಣಗೆರೆಯ ಕಾರ್ಲ್ಮಾರ್ಕ್ಸ್ ನಗರದಲ್ಲಿ ಐ ಲವ್ ಮಹಮದ್ ಬ್ಯಾನರ್ ಹಾಕಿದ್ದ ವಿಚಾರ ಹಿಂದೂ-ಮುಸ್ಲೀಂರ ನಡುವೆ ಸಂಘರ್ಷಕ್ಕೆ ಕಾರಣವಾಗಿ ಕಲ್ಲು ತೂರಾಟ ನಡೆದಿತ್ತು.
ಈ ಬರಹವುಳ್ಳ ಫ್ಲೇಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಸಂಘರ್ಷ ನಡೆದಿತ್ತು. ನಂತರ ಪೊಲೀಸರು ತಿಳಿಗೊಳಿಸಿದರು.
ಬೆಳಗಾವಿ:ನಗರದ ಖಡಕ್ ಗಲ್ಲಿಯ ಮೆಹಬೂಬ್ ಸುಭಾನಿ ದರ್ಗಾದ ಉರುಸ್ ಮೆರವಣಿಗೆಯ ಸಮಯದಲ್ಲಿ ನಿನ್ನೆ ರಾತ್ರಿ ಹಿಂದೂಗಳು ಹಾಗೂ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಅನುಮತಿ ನೀಡಿದ ದಾರಿ ಬಿಟ್ಟು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ಐ ಲವ್ ಮುಹಮದ್ ಘೋಷಣೆ ಕೂಗಿದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಲ್ಲು ತೂರಾಟ ನಡೆಸಲಾಗಿದೆ.
ಘಟನೆಯಿಂದ ಬೆಳಗಾವಿ ನಗರ ಉದ್ವಿಗ್ನಗೊಂಡಿದೆ. ಸ್ಥಳದಲ್ಲಿ ಪೊಲೀಸರು ಗಸ್ತಿನಲ್ಲಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಕಲ್ಬುರ್ಗಿ:
ವೈದ್ಯಕೀಯ ಶಿಕ್ಷಣ ಸಚಿವರ ತವರು ಕ್ಷೇತ್ರವಾದ ಸೇಡಂ ತಾಲ್ಲೂಕಿನ ಊಡಗಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಐ ಲವ್ ಮಹಮದ್ ಬ್ಯಾನರ್ ಕಂಡು ಬಂದಿದ್ದು, ವಿವಿಧ ಹಿಂದೂ ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಒಟ್ಟಾರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾಗಿ ದೇಶದ ವಿವಿಧೆಡೆ ಹಬ್ಬಿರುವ ಐ ಲವ್ ಮಹಮದ್ ಬ್ಯಾನರ್ ಹಾಗೂ ಘೋಷಣೆ ಈಗ ಕರ್ನಾಟಕದ ಹಲವು ಜಿಲ್ಲೆಗಳಿಗೆ ಹಬ್ಬಿರುವುದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.