Sunday, October 5, 2025
Homeರಾಜ್ಯಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್‌ ಸ್ಪರ್ಶ, ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ಎಲ್ಲ ಸೌಲಭ್ಯ

ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್‌ ಸ್ಪರ್ಶ, ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ಎಲ್ಲ ಸೌಲಭ್ಯ

Hasanamba Darshanotsava gets a high-tech touch, all facilities will be available on WhatsApp

ಹಾಸನ, ಅ.5- ವರ್ಷಕ್ಕೊಮೆ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಹಿಂದಿಗಿಂತಲೂ ಅದ್ಧೂರಿಯಾಗಿ ಆಯೋಜಿಸಲು ಜಿಲ್ಲಾಡಳಿತವು ಭರದ ಸಿದ್ಧತೆ ನಡೆಸುತ್ತಿದೆ.

ಅ.9ರಂದು ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23ರಂದು ಮುಚ್ಚಲಾಗುವುದು. ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಉಳಿದ ಎಲ್ಲಾ ದಿನಗಳಲ್ಲಿ ನೈವೇದ್ಯ ಸಮಯ ಹೊರತುಪಡಿಸಿ ಉಳಿದ ವೇಳೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ತೊಂದರೆ ಆಗದಂತೆ ಫ್ಯಾನ್‌, ಗರ್ಭಗುಡಿ ಮುಂಭಾಗ ಎಸಿ, ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಮತ್ತು ಹೊರಗೆ ಹೂವಿನ ಅಲಂಕಾರ ಆಕರ್ಷಕವಾಗಿ ಮಾಡಲಾಗುತ್ತಿದೆ. ಭದ್ರತೆಗೆ ನೂರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದ್ದು, ಬಿಗಿ ಪೊಲೀಸ್‌‍ ಬಂದೋಬ್ತ್‌‍ ಕೈಗೊಳ್ಳಲಾಗಿದೆ.
ಜಾತ್ರಾ ಅವಧಿಯಲ್ಲಿ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಭಕ್ತರಿಗೆ ವಿಶೇಷ ಆಕರ್ಷಣೆಯಾಗಲಿವೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುವ ಹಾಸನಾಂಬ ಜಾತ್ರಾ ಮಹೋತ್ಸವವು ಈ ಬಾರಿ ಹೆಚ್ಚುವರಿ ಭಕ್ತ ಸಮಾಗಮದ ನಿರೀಕ್ಷೆಯಲ್ಲಿದೆ. ಸಿದ್ಧತೆ ಹಾಗೂ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಈ ಬಾರಿ ಜಾತ್ರಾ ಉತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರಿಗೆ ಸುಗಮ ಮತ್ತು ಶ್ರದ್ಧಾಭರಿತ ದರ್ಶನ ಅನುಭವ ಲಭ್ಯವಾಗಲಿದೆ.

ಜಾತ್ರೆಯ ಯಶಸ್ಸಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮತ್ತು ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಈ ನಡುವೆ ದೇವಸ್ಥಾನಕ್ಕೆ ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡಿದೆ. ಆಹ್ವಾನ ಪತ್ರಿಕೆ ಹಂಚಿಕೆ, ಸ್ವಾಗತ ಕಮಾನು ನಿರ್ಮಾಣ, ನಗರದಾದ್ಯಂತ ಲೈಟಿಂಗ್‌ ಹಾಗೂ ಎಲ್‌‍ಇಡಿ ಅಳವಡಿಕೆ ಕಾರ್ಯ ಜೋರಾಗಿದೆ.

ಗೋಲ್ಡ್ ಪಾಸ್‌‍ ಜಾರಿ: ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿ ಇನ್ನಷ್ಟು ಜನ ಸೇರುವ ನಿರೀಕ್ಷೆ ಇದೆ. ನೂಕುನುಗ್ಗಲು ತಪ್ಪಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್‌‍ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ವಿಶೇಷ ದರ್ಶನಕ್ಕಾಗಿ 300ರೂ. ಮತ್ತು 1000ರೂ.ಗಳ ಪಾಸ್‌‍ ವ್ಯವಸ್ಥೆ. ವಿಐಪಿ ಮತ್ತು ವಿವಿಐಪಿ ಪಾಸ್‌‍ಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಪಡಿಸಿ, ಮೊದಲ ಬಾರಿಗೆ ಗೋಲ್ಡ್‌‍ ಪಾಸ್‌‍ ಜಾರಿಗೊಂಡಿದೆ. ಒಂದು ಪಾಸ್‌‍ಗೆ ಒಬ್ಬರಿಗೆ ಮಾತ್ರ ಅವಕಾಶ. ದಿನಕ್ಕೆ ಎರಡು ಗಂಟೆ ಮಾತ್ರ ವಿಶೇಷ ದರ್ಶನಕ್ಕೆ ಅವಕಾಶ. ವೃದ್ಧರು ಮತ್ತು ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಸ್ತ್ರೋಕ್ತ ವಿಧಿ-ವಿಧಾನ:
ಅಶ್ವೀಜ ಮಾಸದ ಮೊದಲ ಗುರುವಾರ, ಅ.9ರಂದು ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಗರ್ಭಗುಡಿ ಸ್ವಚ್ಛತಾ ಕಾರ್ಯದ ಬಳಿಕ ಮಾರನೇ ದಿನ ಬೆಳಗ್ಗೆ 5 ಗಂಟೆಯಿಂದ ಭಕ್ತರಿಗೆ ದರ್ಶನ ಭಾಗ್ಯ ಲಭಿಸುತ್ತದೆ.

ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್‌ ಸ್ಪರ್ಶ:
ಈ ಬಾರಿ ದೇವಿ ದರ್ಶನಕ್ಕೆ ಹೈಟೆಕ್‌ ಸ್ಪರ್ಶ ದೊರೆತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಭಕ್ತರಿಗೆ ಅತ್ಯಾಧುನಿಕ ಆನ್‌ಲೈನ್‌ ಸೇವೆ ನೀಡುವ ಪ್ರಯತ್ನವಾಗಿ ದೇವಾಲಯ ಆಡಳಿತ ಮಂಡಳಿ ವಾಟ್ಸಾಪ್‌ ಚಾಟ್‌ಬಾಟ್‌ ವ್ಯವಸ್ಥೆ ಆರಂಭಿಸಿದೆ. 6366105589 ನಂಬರ್‌ಗೆ ವಾಟ್ಸಾಪ್‌ನಲ್ಲಿ ಹಾಯ್‌ ಮೆಸೇಜ್‌ ಕಳುಹಿಸಿದರೆ, ಭಕ್ತರಿಗೆ ದರ್ಶನ ಸಂಬಂಧಿತ ಎಲ್ಲಾ ಮಾಹಿತಿಗಳು ತಕ್ಷಣವೇ ಲಭ್ಯವಾಗಲಿದೆ.

RELATED ARTICLES

Latest News