Sunday, October 5, 2025
Homeರಾಜ್ಯಖ್ಯಾತ ಸಾಹಿತಿ, ಕತೆಗಾರ ಪ್ರೊ.ಮೊಗಳ್ಳಿ ಗಣೇಶ್‌ ವಿಧಿವಶ

ಖ್ಯಾತ ಸಾಹಿತಿ, ಕತೆಗಾರ ಪ್ರೊ.ಮೊಗಳ್ಳಿ ಗಣೇಶ್‌ ವಿಧಿವಶ

Literary scholar, storyteller Prof. Mogalli Ganesh passes away

ಬೆಂಗಳೂರು, ಅ.5-ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್‌ (64) ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರಿಯರು ಸೇರದಂತೆ ಆಪಾರ ಸಂಖ್ಯೆಯ ಓದುಗರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆಸಲಾಗುತ್ತದೆ. ಕಳೆದ ಹಲವು ದಿನಗಳಿಂದ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.ಇದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ್‌ ತಂಗಡಿಗಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

1963ರ ಜುಲೈ 1ರಂದು ಚನ್ನಪಟ್ಟಣ ತಾಲೂಕಿನ ಸಂತೆಮೊಗೇನಹಳ್ಳಿಯಲ್ಲಿ ಜನಿಸಿದ ಡಾ.ಮೊಗಳ್ಳಿ ಗಣೇಶ್‌ ಕನ್ನಡದ ಪ್ರಮುಖ ಕಥೆಗಾರ, ಪ್ರಬಂಧಕಾರ, ಕಾದಂಬರಿ ಮತ್ತು ವೈಚಾರಿಕ ಚಿಂತಕರಾಗಿದ್ದರು.ಡಾ. ಮೊಗಳ್ಳಿ ಗಣೇಶ್‌ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕೃತಿಗಳು ದಲಿತ ಅಸಿತೆ, ಸಾಮಾಜಿಕ ನ್ಯಾಯ ಮತ್ತು ದೇಸಿ ಚಿಂತನೆಯನ್ನು ಶಾಶ್ವತಗೊಳಿಸುತ್ತವೆ. ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಮಾರು 28 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಮೊಗಳ್ಳಿ ಗಣೇಶ್‌ ತಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಸೂರ್ಯನನ್ನು ಬಚ್ಚಿಡಬಹುದೆ? ಮತ್ತು ಅನಾದಿ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು.

ಹಳ್ಳಿಯ ಸರಳ ಜೀವನದ ಅನುಭವಗಳು ಅವರ ಸಾಹಿತ್ಯದಲ್ಲಿ ಮಣ್ಣಿನ ವಾಸನೆಯನ್ನು ತುಂಬಿದವು. ಪ್ರಾಥಮಿಕ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದ ಅವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು. ನಂತರ ಜಾನಪದ ಅಧ್ಯಯನದಲ್ಲಿ ಡಾಕ್ಟರೇಟ್‌ ಪದವಿ ಪಡೆದರು. ಪ್ರಬಲ ದಲಿತ ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗಿ ಹೋಗುತ್ತಿದ್ದರು.

ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು ಮುಂತಾದವು ಮೊಗಳ್ಳಿ ಗಣೇಶ್‌ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ಬೇರು ಅವರ ಬೃಹತ್‌ ಕಾದಂಬರಿ. ಕಥನ ಅವರ ಪ್ರಬಂಧ ಸಂಕಲನ. ಸೊಲ್ಲು, ವಿಮರ್ಶೆ, ಶಂಬಾ ಭಾಷಿಕ ಸಂಶೋಧನೆ, ತಕರಾರು ಅವರ ವಿಮರ್ಶಾ ಕೃತಿಗಳು. ವಿಶ್ಲೇಷಣೆ ಎಂಬ ಅಂಕಣ ಕೂಡಾ ಜನಪ್ರಿಯ. ಅಂಬೇಡ್ಕರ್‌ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ಅವರ ಚಿಂತನ ಕೃತಿ. ಗಣೇಶ್‌ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.

ಸಾಹಿತ್ಯ ಸಾಧನೆಯಲ್ಲಿ ಅವರು ಕಥೆ, ಕವನ, ವಿಮರ್ಶೆ ಮತ್ತು ಆತಕಥನದಲ್ಲಿ ತಮ ಛಾಪು ಮೂಡಿಸಿದರು. ಬುಗುರಿ ಕಥೆಯಲ್ಲಿ ಬಾಲಕನ ಮನಸ್ಥಿತಿ ಮತ್ತು ಕ್ರೂರ ಪ್ರಪಂಚದ ಆಘಾತವನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ. ಭತ್ತ ಕಥೆಯು ಹಸಿವು, ಅವಮಾನ ಮತ್ತು ದಸಂಸ ಹೋರಾಟದ ಹಿನ್ನೆಲೆಯಲ್ಲಿ ಸಾಹಿತ್ಯದ ಮೂಲಕ ಹರಡಿದೆ. ಇದು ಓದುಗರಲ್ಲಿ ಬಾಲ್ಯದ ನೆನಪುಗಳನ್ನು ಉದ್ದೀಪಿಸುವಂತಿದೆ. ಅವರ ಇತರ ಕಥಾ ಸಂಕಲನಗಳಾದ ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ ಮತ್ತು ಮೊಗಳ್ಳಿ ಕಥೆಗಳು ದೇಸಿ ಜೀವನದ ಸೂಕ್ಷ್ಮತೆಗಳನ್ನು ಬಿಂಬಿಸುತ್ತವೆ. ದೇವರ ದಾರಿಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಲಭಿಸಿತು.

ಮೊಗಳ್ಳಿ ಗಣೇಶ್‌ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜಕುಮಾರ್‌ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ದೇವಸ್ಮಶಾನ ಸಂಕಲನ ಮಹತ್ವದ್ದು. ಇದಕ್ಕೆ ಪು.ತಿ.ನ. ಕಾವ್ಯ ಪ್ರಶಸ್ತಿ ಲಭಿಸಿತು.

ಸಚಿವ ಶಿವರಾಜ್‌ ತಂಗಡಗಿ ಸಂತಾಪ
ಕನ್ನಡದ ಖ್ಯಾತ ಕಥೆಗಾರ,ವಿಮರ್ಶಕ ಡಾ. ಮೊಗಳ್ಳಿ ಗಣೇಶ್‌ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೊಗಳ್ಳಿ ಗಣೇಶ್‌ ಅವರ ಕೊಡುಗೆ ಗಮನಾರ್ಹ. ತಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ಸೂರ್ಯನನ್ನು ಬಚ್ಚಿಡಬಹುದೆ? ಮತ್ತು ಅನಾದಿ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು.

ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆ ವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್‌ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ಬೇರು ಅವರ ಬೃಹತ್‌ ಕಾದಂಬರಿ. ಕಥನ ಅವರ ಪ್ರಬಂಧ ಸಂಕಲನ. ಸೊಲ್ಲು, ವಿಮರ್ಶೆ, ಶಂಬಾ ಭಾಷಿಕ ಸಂಶೋಧನೆ, ತಕರಾರು ಅವರ ವಿಮರ್ಶಾ ಕೃತಿಗಳು. ವಿಶ್ಲೇಷಣೆ ಎಂಬ ಅಂಕಣ ಕೂಡಾ ಜನಪ್ರಿಯ. ಅಂಬೇಡ್ಕರ್‌ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ ಅವರ ಚಿಂತನ ಕೃತಿ. ಗಣೇಶ್‌ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.

ಮೊಗಳ್ಳಿ ಗಣೇಶ್‌ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜ್‌ಕುಮಾರ್‌ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ.ಆಗಿದ್ದ ಮೊಗಳ್ಳಿ ಗಣೇಶ್‌ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನು ಕಳೆದುಕೊಂಡಿದೆ ಎಂದು ಸಚಿವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

RELATED ARTICLES

Latest News