ಕೋಲ್ಕತ್ತ, ಅ.5-ಉತ್ತರ ಬಂಗಾಳದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಡಾರ್ಜಿಲಿಂಗ್‌ನ ಮಿರಿಕ್ ಮತ್ತು ಸುಖಿಯಾ ಪೋಖಾರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ 15 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಕುರ್ಸಿಯೊಂಗ್ ಬಳಿಯ ರಾಷ್ಟ್ರೀಯ ಹೆದ್ದಾರಿ 110 ರ ಉದ್ದಕ್ಕೂ ಇರುವ ಹುಸೇನ್ ಖೋಲಾದಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದಿಂದ ಈ ಅವಘಡ ಸಂಭವಿಸಿದೆ. ಡಾರ್ಜಿಲಿಂಗ್ ಜಿಲ್ಲಾ ಪೊಲೀಸರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಭಾರಿ ಮಳೆಯಿಂದ ಸಂಭವಿಸುತ್ತಿರುವ ಈ ಭೂಕುಸಿತಗಳಲ್ಲಿ ಮಿರಿಕ್‌ನ ಜಸ್ಬೀರ್ ಬಸ್ತಿ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಸುಖಿಯಾ ಪೊಖರಿ ಬ್ಲಾಕ್‌ನ ಬಿಜುವಾ ಗ್ರಾಮದ 78 ವರ್ಷದ ರಾಘುಬೀರ್ ರೈ ಅವರ ಮನೆಯ ಮೇಲೆ ಭೂಕುಸಿತವಾಗಿ ಮೃತಪಟ್ಟಿದ್ದಾರೆ. ಅವರ ಕುಟುಂಬದ ನಾಲ್ಕು ಸದಸ್ಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ರೀತಿ, ಕಾಲಿಂಪಾಂಗ್‌ನಲ್ಲಿ ಒಂದು ಮಗು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ.
ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.ಡಾರ್ಜಿಲಿಂಗ್ ಮತ್ತು ಸಿಲಿಗುರಿ ನಡುವಿನ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಲ್ಪೈಗುರಿ, ಸಿಲಿಗುರಿ ಮತ್ತು ಕೂಚ್‌ಬೆಹಾರ್‌ಗಳಲ್ಲಿಯೂ ಮಳೆಯಾಗಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಕುಸಿದು ಹೋಗಿವೆ, ಮನೆಗಳು ನಾಶಗೊಂಡಿವೆ.
ಡಾರ್ಜಿಲಿಂಗ್ ಜಿಲ್ಲಾ ಪೊಲೀಸ್ ತಂಡಗಳು ಪ್ರತಿಕೂಲ ಹವಾಮಾನದ ನಡುವೆ ರಕ್ಷಣಾ ಕಾರ್ಯಗಳ ನೇತೃತ್ವ ವಹಿಸಿವೆ. ಮಳೆ ಎಡೆಬಿಡದೇ ಸುರಿಯುತ್ತಿದ್ದು, ಮತ್ತಷ್ಟು ಭೂಕುಸಿತಗಳು ಸಂಭವಿಸಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗೂ ಮಳೆ ಅಡ್ಡಿ ಮಾಡಿದೆ.
ರಬಿಜ್ಹೋರಾ ಬಳಿ ಮತ್ತು ನದಿಯ ಉದ್ದಕ್ಕೂ ಇರುವ ತೀಸ್ತಾ ಬಜಾರ್ ಬಳಿ ಪ್ರವಾಹ ಉಂಟಾದ ಕಾರಣ, ಕಾಲಿಂಪಾಂಗ್‌ನಿಂದ ತೀಸ್ತಾ ಬಜಾರ್ ಮೂಲಕ ಡಾರ್ಜಿಲಿಂಗ್‌ಗೆ ಹೋಗುವ ರಸ್ತೆ ಮುಚ್ಚಲ್ಪಟ್ಟಿದೆ. ಕೊರೊನೇಷನ್ ಸೇತುವೆಯ ಮೂಲಕ ಸಿಕ್ಕಿಂ ಮತ್ತು ಡಾರ್ಜಿಲಿಂಗ್ ಬೆಟ್ಟಗಳ ಕಡೆಗೆ ಸಂಪರ್ಕ ಕಡಿತಗೊಂಡಿದೆ. ಪರ್ಯಾಯವಾಗಿ ಕಾಲಿಂಪಾಂಗ್ ಜಿಲ್ಲೆಯ ಲಾವಾ-ಗೋರುಬಥನ್ ಮಾರ್ಗವನ್ನು ಬಳಸುವಂತೆ ಪೊಲೀಸರು ಪ್ರಯಾಣಿಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ಬೆಳಿಗ್ಗೆಯವರೆಗೆ ಉಪ-ಹಿಮಾಲಯನ್, ಪಶ್ಚಿಮ ಬಂಗಾಳದಲ್ಲಿ ಕಡಿಮೆ ಒತ್ತಡದ ಪ್ರದೇಶವು ಭಾರಿ ಅಥವಾ ಅತಿ ಹೆಚ್ಚಿನ ಮಳೆಯನ್ನು ತರಲಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಡಾರ್ಜಿಲಿಂಗ್‌ನ ನೆರೆಯ ಜಿಲ್ಲೆಯಾದ ಉತ್ತರ ಬಂಗಾಳದ ಅಲಿಪುರ್‌ದಾರ್‌ನಲ್ಲಿ ಸೋಮವಾರ ಬೆಳಿಗ್ಗೆ ತನಕ ಭಾರೀ ಮಳೆ ಮುಂದುವರಿಯಲಿದೆ. ಗುಡ್ಡಗಾಡುಗಳಿರುವ ಜಿಲ್ಲೆಗಳಲ್ಲಿ ರಾತ್ರಿಯಿಡೀ ನಿರಂತರ ಮಳೆಯಾಗುತ್ತಿರುವುದರಿಂದ, ನೆರೆಯ ಜಿಲ್ಲೆಯಾದ ಜಲ್ಪೈಗುರಿಯ ಮಲ್ಬಜಾರ್‌ನ ದೊಡ್ಡ ಪ್ರದೇಶವು ನೀರಿನಲ್ಲಿ ಮುಳುಗಿದೆ.
ತೀಸ್ತಾ, ಮಾಲ್ ಮತ್ತು ಇತರ ಬೆಟ್ಟದ ನದಿಗಳ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿಯನ್ನು ತಂದಿದೆ. ಬೆಳಿಗ್ಗೆ ತನಕ ಈ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಡಾರ್ಜಿಲಿಂಗ್‌ನಲ್ಲಿ 184.4 ಮಿ.ಮೀ ಮಳೆ ಸುರಿದಿದ್ದು, ಇದು ಸಾಮಾನ್ಯ ತಿಂಗಳ ಮಳೆಯ ಅರ್ಧ ಭಾಗಕ್ಕೂ ಹೆಚ್ಚು. ಹವಾಮಾನ ಇಲಾಖೆಯು ಜನರಿಗೆ ಮರಗಳು, ವಿದ್ಯುತ್ ಕಂಬಗಳ ಕೆಳಗೆ ಆಶ್ರಯ ಪಡೆಯದಂತೆ ಮತ್ತು ನೀರಿನ ಸಂಪರ್ಕವನ್ನು ತಪ್ಪಿಸುವಂತೆ ಸಲಹೆ ನೀಡಿದೆ. ಭೂಕುಸಿತ ಸಾಧ್ಯತೆ ಹೆಚ್ಚಾಗಿದೆ. ಸ್ಥಳೀಯರು ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.
ಪಶ್ಚಿಮ ಬಂಗಾಳ ಸರ್ಕಾರ ಈ ಪರಿಸ್ಥಿತಿಗೆ ತಕ್ಕಂತೆ ರಕ್ಷಣಾ ಕಾರ್ಯಗಳನ್ನು ತೀವ್ರಗೊಳಿಸಿದ್ದು, ಪೊಲೀಸ್, ಫೈರ್ ಸರ್ವೀಸ್‌ಗಳು ಈ ತಂಡಗಳನ್ನು ಸ್ಥಳಕ್ಕೆ ಕಳುಹಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ, ನೆರೆ ಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.