ಬೆಂಗಳೂರು, ಅ.5-ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ವೇಳೆ ಗಣತಿದಾರರು ನಿಮ್ಮ ಉಪಜಾತಿ ಯಾವುದು ಎಂದು ಕೇಳಿದಾಗ, ಅದೆಲ್ಲ ಯಾಕೆ ಬೇಕು? ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಎಂದು ಬರೆದುಕೊಳ್ಳಿ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ ಪ್ರಸಂಗ ಜರುಗಿದೆ.
ಇಂದು ಗಣತಿದಾರರು ವಿಜಯನಗರದಲ್ಲಿರುವ ಸೋಮಣ್ಣ ಅವರ ನಿವಾಸಕ್ಕೆ ತೆರಳಿದ್ದರು. ಜಾತಿ ಗಣತಿ ಸಮೀಕ್ಷೆ ಕುರಿತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಲಿಲ್ಲ. ಅಲ್ಲದೆ, ಉಪಜಾತಿ ಯಾವುದು ಎಂದು ಕೇಳಿದಾಗ, ಅದೆಲ್ಲ ಯಾಕೆ ಬೇಕು? ಸಿದ್ದರಾಮಯ್ಯ ಜಾತಿ ಎಂದು ಬರೆದುಕೊಳ್ಳಿ ಎನ್ನುತ್ತಲೇ ಗರಂ ಆಗಿದ್ದಾರೆ.
ಮದುವೆ ಆದಾಗ ಎಷ್ಟು ವರ್ಷ ಎಂದು ಕೇಳಿದ ಪ್ರಶ್ನೆಗೂ, ಅದೆಲ್ಲಾ ಏಕೆ ಬೇಕು? ನಮ ಅಪ್ಪ ಅಮನ ಕೇಳಬೇಕು.ಆಗ ನನ್ನ ವಯಸ್ಸು26 ಎಂದು ಬರೆದುಕೊಳ್ಳಿ ಇದೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ವೋಟ್‌ಗಾಗಿ ಮಾಡುತ್ತಿರುವ ನಾಟಕ ಎಂದು ಕಿಡಿಕಾರಿದರು.
ಇನ್ನು ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನೇ ಹಾಕಿಕೊಳ್ಳಿ ಎಂದು ರೇಗಾಡಿದ ಸೋಮಣ್ಣ , ಯಾವ್? ತಲೆ ಕೆಟ್ಟಿರೋರು ಈ ರೀತಿ ಪ್ರಶ್ನೆಗಳನ್ನೆಲ್ಲಾ ಹಾಕಿದ್ದು? ಅವರನ್ನೇ ಕರೀಬೇಕು. ಎಲ್ಲಿ ಕೆಲಸ ಮಾಡೋದು ಎಂಬ ಪ್ರಶ್ನೆಗೆ ಉತ್ತರ ಕೊಡಲು ಆಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಯಾವ ಗ್ರೂಪ್ ಎಂದು ಹಾಕುತ್ತೀರಿ? ಆದಾಯ ಎಷ್ಟು? ಎಂಬ ಪ್ರಶ್ನೆ ಇದೆ. ಇದಕ್ಕೆ ಆದಾಯ ಇಲಾಖೆ ಕೇಳಿದರೆ, ಉತ್ತರ ಕೊಡುತ್ತಾರೆ. ನಾವು ಟ್ಯಾಕ್‌್ಸಪೇಯರ್ಸ್. ಸಿದ್ದರಾಮಯ್ಯ ಕೆಲಸಕ್ಕೆ ಬಾರದ ಕೆಲಸ ಸೃಷ್ಟಿ ಮಾಡಿದ್ದಾರೆ. ಇದು ಅವೈಜ್ಞಾನಿಕ ಸಮೀಕ್ಷೆ ಆಗಿದೆ. ಸುಮಾರು 1 ಗಂಟೆ 4 ನಿಮಿಷಗಳ ಕಾಲ ನನ್ನ ಮಾಹಿತಿ ಪಡೆದಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇನ್ನೊಂದು ಕಾಂತರಾಜ್ ಸಮಿತಿ ವರದಿ ಆಗುತ್ತೆ ಅಷ್ಟೇ ಎಂದು ಸಿಡಿಮಿಡಿಗೊಂಡಿದ್ದಾರೆ.
ಸಮೀಕ್ಷೆ ಸರಳೀಕರಣ ಮಾಡಿ: ಇದರಲ್ಲಿ ಸರ್ಕಾರ ಯಾವ ಸಾಧನೆಯನ್ನೂ ಮಾಡಲು ಆಗವುದಿಲ್ಲ. ಅವೈಜ್ಞಾನಿಕ ಗಣತಿಯಿಂದ ಮಾಹಿತಿ ಸಿಗಲ್ಲ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಗೊತ್ತಿಲ್ಲ. ಅಧಿಕಾರಿಗಳು ಕೇಳಿದ ಸುಮಾರು ಮಾಹಿತಿ ಅನವಶ್ಯಕವಾಗಿತ್ತು. ಇದರಿಂದ ಜನರು ಗೊಂದಲಗೊಳ್ಳುತ್ತಿದ್ದಾರೆ. ಸಮೀಕ್ಷೆ ಸರಳೀಕರಣ ಮಾಡಿ ಎಂದು ಸಲಹೆ ನೀಡಿದರು.
ಇದನ್ನು ಮುಗಿಸಲು ಕನಿಷ್ಠ ಪಕ್ಷ 6 ತಿಂಗಳು ಬೇಕು. ಇದು ಕಾಂತರಾಜ್ ಸಮಿತಿಗಿಂತಲೂ ಕೆಟ್ಟದಾಗಿ ಆಗುತ್ತದೆ. ಈ ಸರ್ಕಾರಕ್ಕೆ ಜಾತಿ ಬಿಟ್ಟರೆ ಬೇರೆ ಅವಶ್ಯಕತೆ ಇಲ್ಲ. ಯಾವ ಸಮಾಜಕ್ಕೆ ಅನ್ಯಾಯ ಮಾಡಬೇಕು ಎಂಬುದು ನಿಮ ತಲೆಯಲ್ಲಿ ಇದೆ. ಸಿದ್ದರಾಮಯ್ಯರ ಬಗ್ಗೆ ಕಾಂಗ್ರೆಸ್ ಅವರೇ ಮಾತನಾಡುತ್ತಿದ್ದಾರೆ. ಇದು ನಿಮಗೆ ಇದು ಶೋಭೆ ತರಲ್ಲ. ಈ ರೀತಿಯಾಗಿ ಮಾಡಲು ಹೋದರೆ, ಒಂದು ವರ್ಷ ಬೇಕು. ಈಗಲೇ ಸಮೀಕ್ಷೆ ರದ್ದುಗೊಳಿಸಿ ಎಂದು ಸೋಮಣ್ಣ ತುಸು ಆಕ್ರೋಶದಿಂದಲೇ ಅಸಮಾಧಾನ ಹೊರಹಾಕಿದರು.
ರಾಜ್ಯದೆಲ್ಲೆಡೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ರಾಜಕಾರಣಿಗಳ ಮನೆಗಳಿಗೂ ಗಣತಿದಾರರು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಪಟ್ಟಿಯಲ್ಲಿ ಬೇಡವಾದ ಪ್ರಶ್ನೆಗಳು ತುಂಬಿವೆ ಎನ್ನುವ ಆರೋಪ ಕೇಳಿ ಬಂದಿದೆ. ನಿನ್ನೆ ಡಿಸಿಎಂ ಡಿ.ಕೆ .ಶಿವಕುಮಾರ್ ಕೂಡ ಪ್ರಶ್ನೆಗಳನ್ನು ಕಡಿಮೆ ಮಾಡಿ ಎಂದು ಸಿಟ್ಟಾಗಿದ್ದರು.