Sunday, October 5, 2025
Homeರಾಜ್ಯಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ : ಸಿಎಂ ಸಿದ್ದರಾಮಯ್ಯ ಭರವಸೆ

ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ : ಸಿಎಂ ಸಿದ್ದರಾಮಯ್ಯ ಭರವಸೆ

Vachana University to be established in Bhalki, Bidar district: CM Siddaramaiah promises

ಬೆಂಗಳೂರು, ಅ.5– ಬೀದರ್‌ ಜಿಲ್ಲೆಯ ಭಾಲ್ಕಿಯಲ್ಲಿ ಮುಂದಿನ ವರ್ಷದಿಂದ ವಚನ ವಿಶ್ವವಿದ್ಯಾಲಯವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ನಗರದ ಅರಮನೆ ಮೈದಾನದ ಆವರಣದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಸಮಸ್ತ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರು ಕರ್ನಾಟಕ ಸಾಂಸ್ಕೃತಿಕ ನಾಯಕ ಘೋಷಣೆಯ ವರ್ಷಾಚರಣೆ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಕನ್ನಡ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣ ಅವರ ಬಗ್ಗೆ ಯಾವುದೇ ವಿಚಾರಗಳಿದ್ದರೂ ಅದಕ್ಕೆ ನಮ ಸರ್ಕಾರ ತಕ್ಷಣ ಸ್ಪಂದಿಸಲಿದೆ ಎಂದರು.

ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕುಂಟುತ್ತಾ ಸಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ಅದನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.ಬೆಂಗಳೂರಿನ ನಮ ಮೆಟ್ರೊಗೆ ಬಸವಣ್ಣ ಅವರ ಹೆಸರನ್ನು ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇದು ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆ. ನಮ ಪಾಲು ಶೇ.87ರಷ್ಟಿದೆ, ಕೇಂದ್ರ ಸರ್ಕಾರದ ಪಾಲು ಶೇ.13 ರಷ್ಟಿದೆ. ನಮ ಪಾಲು ಹೆಚ್ಚಿದ್ದರೂ, ಯಾವುದೇ ನಿರ್ಣಯ ತೆಗೆದುಕೊಳ್ಳಬೇಕಾದರೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಅಗತ್ಯ. ಪೂರ್ಣ ಪ್ರಮಾಣದಲ್ಲಿ ನಮದೇ ಯೋಜನೆಯಾಗಿದ್ದರೆ ಈ ಕ್ಷಣವೇ ನಾನು ಘೋಷಣೆ ಮಾಡುತ್ತಿದ್ದೆ. ಈಗ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಜಾತಿಯಿಂದ ಯಾರೂ ಬುದ್ಧಿವಂತರಾಗುವುದಿಲ್ಲ. ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಲ್ಲ. ಜಾತಿ ವ್ಯವಸ್ಥೆ ಇತ್ತು ಅದಕ್ಕಾಗಿ ನಾನು ಕುರುಬ ಸಮುದಾಯದಲ್ಲಿ ಹುಟ್ಟಿದ್ದೇನೆ.
ಪಟ್ಟಭದ್ರರೂ ಜಾತಿಯ ಕಾರಣಕ್ಕೆ ಶ್ರೂದ್ರರನ್ನು ವಿದ್ಯೆಯಿಂದ ದೂರ ಮಾಡಿದರು. ಜಾತಿಯಿಂದ ಯಾರೂ ದೊಡ್ಡವರಾಗುವುದಿಲ್ಲ. ಹಾಗೇ ನೋಡಿದರೆ ವಾಲೀಕಿ, ರಾಮಾಯಣ ಬರೆದರು, ಬೆಸ್ತರು ಮಹಾಭಾರತ ಬರೆದರು, ದಲಿತ ಸಮುದಾಯದ ಡಾ.ಅಂಬೇಡ್ಕರ್‌ ಸಂವಿಧಾನ ಬರೆದರು. ಪ್ರತಿಭೆ ಯಾರ ಅಪ್ಪನ ಸ್ವತ್ತು ಅಲ್ಲ ಎಂದರು.

ಅವಕಾಶ ಸಿಕ್ಕರೆ ಪ್ರತಿಯೊಬ್ಬರೂ ಸಾಧನೆ ಮಾಡುತ್ತಾರೆ. ಸಮಾಜದಲ್ಲಿ ಸಹಿಷ್ಣುತೆ, ಸಹಬಾಳ್ವೆ ಇರಬೇಕು. ವ್ಯಕ್ತಿಗತವಾಗಿ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಅನೇಕ ಧರ್ಮಗಳಿವೆ. ಇಂತಹದೇ ಧರ್ಮದಲ್ಲಿ ಹುಟ್ಟಬೇಕೆಂದು ಯಾರೂ ಅಂದುಕೊಳ್ಳುವುದಿಲ್ಲ. ಧರ್ಮದ ವಿಚಾರಕ್ಕಾಗಿ ಸಮಾಜವನ್ನು ತಪ್ಪು ದಾರಿಗೆ ಎಳೆಯಬಾರದು ಎಂದರು.
ಬಸವ ತತ್ವ ಅನುಯಾಯಿಗಳು ಸಮ ಸಮಾಜದ ನಿರ್ಮಾಣದ ಪ್ರಯತ್ನಮಾಡಬೇಕು. ಮೊದಲ ಅವಧಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯ ಸರಣಿ ಯೋಜನೆಗಳನ್ನು ಹಾಗೂ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾದಾಗ ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಾನತೆ ರೂಪಿಸಲು ಪ್ರಯತ್ನಿಸಿದ್ದಾಗಿ ಹೇಳಿದರು.

ಮುಂದುವರೆದ ಜಾತಿಗಳು ಜಾತಿ ಸಮಾವೇಶ ಮಾಡುವುದು ಅನಗತ್ಯ. ಆದರೆ ಹಿಂದುಳಿದ ಸಮುದಾಯಗಳು ಜಾತಿ ಸಮಾವೇಶಗಳನ್ನು ಮಾಡುವುದು ಸಂಘಟಿತರಾಗುವುದು ಅಗತ್ಯ ಎಂದು ಲೋಹಿಯ ಹೇಳಿದ್ದಾರೆ. ನಮಲ್ಲಿನ ಜಾತಿ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಜಾತಿಗೆ ಚಲನಶೀಲತೆ ಬರಬೇಕು. ಅದಕ್ಕಾಗಿ ಆರ್ಥಿಕ ಶಕ್ತಿ ಬರಬೇಕು ಎಂದರು.

ನಾವೆಲ್ಲರೂ ಶೂದ್ರರು. ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ. ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು. ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೇನೆ. ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆ ಮತ್ತು ಸಹಿಷ್ಣತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು. ನಾನೂ ಇದನ್ನು ಪಾಲಿಸುತ್ತೇನೆ ಎಂದರು.

ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳ, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕೆ ಎಂದರು.

ನಾನು ಕಾನೂನು ವಿದ್ಯಾರ್ಥಿ ಆದ ಗಳಿಗೆಯಿಂದ ನಾನು ಬಸವಣ್ಣನವರ ಅನುಯಾಯಿ. ಅಂಬೇಡ್ಕರ್‌ ಅವರೂ ತಮ ಸಂವಿಧಾನದಲ್ಲಿ ಬಸವಣ್ಣನವರ ಆಶಯಗಳನ್ನೇ ಹೇಳಿದ್ದಾರೆ. ಹೀಗಾಗಿ ಸಂವಿಧಾನ ಮತ್ತು ಶರಣ ಸಂಸ್ಕೃತಿ ಒಂದೇ ಆಗಿದೆ. ನಮ ಸರ್ಕಾರ ಸಂವಿಧಾನದ ಪೀಠಿಕೆ ಓದಿಸುವುದನ್ನು ಅಭಿಯಾನದ ರೀತಿ ನಡೆಸುತ್ತಿದ್ದೇವೆ ಎಂದರು. ನಮಲ್ಲಿ ಅನೇಕ ಜಾತಿ, ಅನೇಕ ಧರ್ಮಗಳಿವೆ. ನಾವೆಲ್ಲರೂ ಶೂದ್ರರು. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು. ಶೂದ್ರರು ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಅರಿಯಬೇಕು ಎಂದರು.

RELATED ARTICLES

Latest News