ಬೆಂಗಳೂರು, ಅ.5– ಹಣಕಾಸು ವಿಚಾರಕ್ಕೆ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾರತಹಳ್ಳಿ ಪೊಲೀಸ್‌ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ರಾಯಚೂರು ಮೂಲದ ಮಹದೇವ (45)ಕೊಲೆಯಾದ ಕೂಲಿ ಕಾರ್ಮಿಕ. ಆರೋಪಿ ತಮಿಳುನಾಡಿನ ತಂಜಾವೂರಿನ ರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ.
ಮಹದೇವ ಹಾಗೂ ರಾಜು ಎಲ್ಲೆಲ್ಲಿ ಕಟ್ಟಡ ನಿರ್ಮಾಣ ಇರುತ್ತದೆಯೋ ಅಲ್ಲಿ ಕೆಲಸ ಮಾಡಿ ಆ ಸ್ಥಳಗಳಲ್ಲೇ ರಾತ್ರಿ ವೇಳೆ ಮಲಗಿಕೊಳ್ಳುತ್ತಿದ್ದರು.ಇವರಿಬ್ಬರು ಮಾರತಹಳ್ಳಿ ಸುತ್ತಮುತ್ತ ಕೆಲಸ ಮಾಡಿಕೊಂಡಿದ್ದರು.
ನಿನ್ನೆ ಒಂದೇ ಕಡೆ ಕೆಲಸಕ್ಕೆ ಹೋಗಿದ್ದ ಇವರಿಬ್ಬರ ಮಧ್ಯೆ ಸಂಜೆ ಹಣಕಾಸು ವಿಚಾರಕ್ಕೆ ಜಗಳವಾಗಿದೆ. ರಾತ್ರಿ ಇವರಿಬ್ಬರು ಮದ್ಯ ಸೇವಿಸಿದ್ದಾರೆ. ಮಾರತಹಳ್ಳಿ ಸರ್ವೀಸ್ ರಸ್ತೆ ಸಮೀಪದಲ್ಲಿ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಆ ವೇಳೆ ಕೋಪದಲ್ಲಿ ರಾಜು ಚಾಕುವಿನಿಂದ ಮಹದೇವನ ಹೊಟ್ಟೆಗೆ ಇರಿದು ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದಿಂದ ನಡುರಸ್ತೆಯಲ್ಲಿ ಬಿದ್ದಿದ್ದನ್ನು ಗಮನಿಸಿ ತಕ್ಷಣ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾರತಹಳ್ಳಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ರಾಜುನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.