ಬೆಂಗಳೂರು, ಅ.6-ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನೆಯಲ್ಲಿ ಪ್ರವಾಸಕ್ಕೆ ಹಾಗೂ ಊರುಗಳಿಗೆ ತೆರಳಿ ಎಂಜಾಯ್ ಮಾಡಿ ಖುಷಿ ಖುಷಿಯಿಂದ ವಾಪಸ ನಗರಕ್ಕೆ ಆಗಮಿಸುತ್ತಿದ್ದವರು ಬೆಳ್ಳಂಬೆಳಗ್ಗೆ ಟ್ರಾಫಿಕ್ನಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಆಯುಧಪೂಜೆ, ವಿಜಯದಶಮಿ, ಹಾಗೂ ವಾರಾಂತ್ಯದ ಸಾಲು ಸಾಲು ರಜೆಹಿಲ್ಲೆಯಲ್ಲಿ ನಗರದ ಬಹುತೇಕ ಜನರು ಪ್ರವಾಸ ಹಾಗೂ ಊರುಗಳಿಗೆ ತೆರಳಿದ್ದರು.
ರಜೆಯ ಮಜಾ ಮುಗಿಸಿಕೊಂಡು ನಗರಕ್ಕೆ ಮರಳುತ್ತಿದ್ದವರಿಗೆ ನಗರಕ್ಕೆ ಪ್ರವೇಶಿಸುವ ದ್ವಾರಗಳಾದ ನೆಲಮಂಗಲದ ಕುಣಿಗಲ್ ಬೈಪಾಸ್, ಮಾಗಡಿರಸ್ತೆ, ಮೈಸೂರುರಸ್ತೆ, ಭನ್ನೇರುಘಟ್ಟರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಬಹುತೇಕ ಮುಖ್ಯ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ರಾತ್ರಿಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.
ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯ ಕುಣಿಗಲ್ಬೈಪಾಸ್, ಮದಾವರ, ಎಂಟನೆಮೈಲಿ, ಜಾಲಹಳ್ಳಿಕ್ರಾಸ್, ಗೊರಗುಂಟೆಪಾಳ್ಯ, ಯಶವಂತಪುರ, ರಾಜಾಜಿನಗರ ದಲ್ಲಿ ಮಧ್ಯರಾತ್ರಿಯಿಂದಲೇ ವಾಹನಗಳ ಸಂಚಾರ ಜೋರಾಗಿತ್ತು.
ಮಳೆಯ ನಡುವೆಯೂ ಕಿಲೋಮೀಟರ್ಗಟ್ಟಲೆ ವಾಹನಗಳು ನಿಂತಿದ್ದು ಕಂಡು ಬಂತು. ಇನ್ನು ನೆಲಮಂಗಲ , ನೈಸ್ರಸ್ತೆ, ಹಾಸನ ರಸ್ತೆಯ ಟೋಲ್ಗಳ ಬಳಿ ಕಾರುಗಳದ್ದೇ ಕಾರು ಬಾರಾಗಿತ್ತು.
ಮೈಸೂರು ಜಂಬೂಸವಾರಿ ವೀಕ್ಷಿಸಿ, ಹಾಗೇಯೇ ಮಡಿಕೇರಿ, ಕೂಡಗು, ಕೇರಳ ಕಡೆಗೆ ಪ್ರವಾಸ ಮುಂದುವರೆಸಿ ಇಂದು ಬೆಳಗ್ಗೆ ವಾಪಾಸ್ ಆಗುತ್ತಿದ್ದವರಿಗೆ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ನಲ್ಲಿ ಸಿಲಿಕಿ ಕೊಂಡು ಪರದಾಡುವಂತಾಗಿತ್ತು. ಇನ್ನು ಬೆಳಗ್ಗೆ ಕೆಲಸಕ್ಕೆ ತೆರಳುವವರಿಗೆ ತಡವಾಗಿದ್ದು ಇಂದೂ ಕೂಡ ರಜೆ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಶಾಲೆಗಳು ಇಂದಿನಿಂದ ಪುನರಾರಂಭವಾಗಿದ್ದು ಮಕ್ಕಳು ಕೂಡ ಶಾಲೆಗೆ ರಜೆ ಹಾಕಿದರು.
ಸಂಚಾರದಟ್ಟಣೆಯಲ್ಲಿ ಸಿಲುಕಿ ಹೈರಾಣಾದ ಜನರು ಬೇಗ ಹೋಗಬೇಕೆಂದು ರಸ್ತೆ ಮಧ್ಯೆದಲ್ಲೇ ಬಸ್ ಇಳಿದು ಮೆಟ್ರೋದತ್ತ ಮುಖ ಮಾಡಿದ ದೃಶ್ಯಗಳು, ತುಮಕೂರು ರಸ್ತೆಯ ಮಾದಾವರ, ಎಂಟನೇಮೈಲಿ, ಮೈಸೂರುರಸ್ತೆ, ಕನಕಪುರ ರಸ್ತೆಯ ಮೆಟ್ರೋ ನಿಲ್ದಾಣಗಳ ಬಳಿ ಜನಸಂದಣಿ ಇಂದು ಬೆಳಗ್ಗೆ ಹೆಚ್ಚಾಗಿ ಕಂಡು ಬಂತು.
ಕಳೆದ ನಾಲ್ಕುದಿನಗಳಿಂದ ಖಾಲಿ ಖಾಲಿಯಾಗಿದ್ದ ಬೆಂಗಳೂರಿನ ರಸ್ತೆಗಳು ಇಂದು ಬೆಳಗ್ಗೆ ಎಂದಿನಂತೆ ಗಿಜಿಗುತ್ತಿದ್ದವು.ಅರ್ಧಗಂಟೆ ಯಶವಂತಪುರ ಮೆಟ್ರೋ ಸ್ಟೇಷನ್ ಬಾಗಿಲು ಬಂದ್: ಪ್ರಯಾಣಿಕರ ದಟ್ಟಣೆಯಿಂದ ಯಶವಂತಪುರದ ಮೆಟ್ರೋ ರೈಲು ನಿಲ್ದಾಣವನ್ನು ಸುಮಾರು ಅರ್ಧಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.
ಆಯುಧಪೂಜೆ, ವಾರಾಂತ್ಯದ ಸಾಲು ಸಾಲು ರಜೆ ಹಿನ್ನೆಯಲ್ಲಿ ಊರು ಹಾಗೂ ಪ್ರವಾಸಕ್ಕೆ ತೆರಳಿ ವಾಪಸ್ ನಗರಕ್ಕೆ ಆಗಮಿಸುತ್ತಿದ್ದವರು ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದರಿಂದ ರಸ್ತೆ ಮಧ್ಯೆ ಬಸ್ ಇಳಿದು ಒಮೆಲೆ ಮೆಟ್ರೋ ದತ್ತ ಮುಖ ಮಾಡಿದ್ದರು.
ಹಾಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಯಶವಂತಪುರದ ಮೆಟ್ರೋ ನಿಲ್ದಾಣದಲ್ಲಿ 8. 50 ರಿಂದ 9. 15 ರವರೆಗೆ ನಿಲ್ದಾಣದ ಬಾಗಿಲನ್ನು ಬಂದ್ ಮಾಡಲಾಗಿತ್ತು.
ಪ್ರಯಾಣಿಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿದ್ದ ದೃಶ್ಯಗಳು ಕಂಡು ಬಂದವು. ಪ್ರಯಾಣಿಕರು ಕಡಿಮೆಯಾಗುತ್ತಿದ್ದಂತೆ ನಿಯಮಾನುಸಾರ ಬಾಗಿಲನ್ನು ತೆರೆಯಲಾಯಿತು. 9.15 ರ ನಂತರ ಎಂದಿನಂತೆ ಮಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.