ಬೆಂಗಳೂರು,ಅ.6- ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ.ತ್ರಿಲೋಕ್‌ಚಂದ್ರ ಕೆ.ವಿ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಲಾ ಕೆ. ಫಾತೀಂ ಅವರ ವರ್ಗಾವನೆಯಿಂದ ತೆರವಾಗಿದ್ದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಹುದ್ದೆಗೆ ತ್ರಿಲೋಕಚಂದ್ರ ಅವರನ್ನು ವರ್ಗಾಯಿಸಲಾಗಿದೆ.
ಸುರಲ್ಕರ್ ವಿಕಾಸ್ ಕಿಶೋರ್ ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಹುದ್ದೆಯಿಂದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
ಜೊತೆಗೆ ರಾಮಚಂದ್ರನ್ ಆರ್. ಅವರ ವರ್ಗಾವಣೆಯಿಂದ ತೆರವಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೊಣೆಗಾರಿಕೆಯನ್ನು ಸುರಲ್ಕರ್ ಅವರಿಗೆ ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.
ಅಲ್ಲದೆ ಸುರಲ್ಕರ್ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆರೋಗ್ಯ ಮತ್ತು ಶಿಕ್ಷಣ) ಹುದ್ದೆಯ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಇವರಿಗೆ ಒಟ್ಟು ಮೂರು ಪ್ರಮುಖ ಹುದ್ದೆಗಳ ಜವಬ್ದಾರಿ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.