ಬೆಂಗಳೂರು,ಅ.6-ಮಗು ಇರುವುದು ಗಮನಿಸದೆ ಕಾರನ್ನು ಮನೆ ಮಾಲೀಕ ರಿವರ್ಸ್ ಪಡೆಯುವಾಗ ಕಾರು ಹರಿದು 11 ತಿಂಗಳ ಮಗು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರಸ್ತೆಯ ನೈಸ್ ರೋಡ್ ಜಂಕ್ಷನ್ ಬಳಿ ಇರುವ ಸ್ವಾಮಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇರುವ ಕುಣಿಗಲ್ ಮೂಲದ ಕುಟುಂಬದ ಅಜಾನ್ (11 ತಿಂಗಳು) ಎಂಬ ಮಗು ಮೃತಪಟ್ಟಿದೆ.ಸ್ವಾಮಿ ಎಂಬುವವರು ನಾಲ್ಕೈದು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಒಂದು ಮನೆಯಲ್ಲಿ ಅವರು ವಾಸವಿದ್ದಾರೆ.
ಕಳೆದ ವಾರವಷ್ಟೆ ಕುಣಿಗಲ್‌ನಿಂದ ಇವರ ಮನೆಗೆ ಕುಟುಂಬವೊಂದು ಬಾಡಿಗೆಗೆ ಬಂದಿದ್ದಾರೆ. ಈ ಕುಟುಂಬದ ಮಗುವೇ ಅಜಾನ್.ಇಂದು ಬೆಳಗ್ಗೆ 9.45 ರ ಸುಮಾರಿನಲ್ಲಿ ಕಾಪೌಂಡ್‌ನಿಂದ ಸ್ವಾಮಿ ಕಾರು ಹೊರ ತೆಗೆಯುತ್ತಿದ್ದಾಗ ಬಾಡಿಗೆಗೆ ಇದ್ದ ಕುಟುಂಬದ ಈ ಮಗು ಮನೆ ಹೊರಗೆ ಬಂದಿದೆ. ಇದು ಸ್ವಾಮಿಯವರ ಗಮನಕ್ಕೆ ಬಂದಿಲ್ಲ.
ಕಾರು ರಿವರ್ಸ್ ಪಡೆಯುತ್ತಿದ್ದಾಗ ಮಗುವಿನ ಮೇಲೆ ಕಾರು ಹರಿದಿದೆ. ತಕ್ಷಣ ಸ್ಥಳೀಯರು ಗಮನಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.